‘ಧ್ವನಿ ಪ್ರತಿಷ್ಠಾನ ದುಬೈ’ಯ 35ನೇ ವಾರ್ಷಿಕ ಕಾರ್ಯಕ್ರಮದ ಸಮಾರೋಪ

ಮಂಗಳೂರು : ‘ಧ್ವನಿ ಪ್ರತಿಷ್ಠಾನ ದುಬೈ’ ಇದರ 35ನೇ ವಾರ್ಷಿಕ ಕಾರ್ಯಕ್ರಮದ ಸಮಾರೋಪವು ಶನಿವಾರ ನಗರದ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಚಲನಚಿತ್ರ ನಟ, ರಂಗಭೂಮಿ ಕಲಾವಿದ ಮುಖ್ಯಮಂತ್ರಿ ಚಂದ್ರು ಸಾಂಸ್ಕೃತಿಕ ಭಾವನೆ ಅಥವಾ ಸ್ಪರ್ಶ ಇಲ್ಲದಿದ್ದರೆ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಸಾಧ್ಯವಿಲ್ಲ. ರಂಗಭೂಮಿಯ ಹುಚ್ಚು ಇದ್ದರೆ ಮಾತ್ರ ರಂಗಕಲೆ ಮುಂದುವರಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಭಾರತದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕಿಂತ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ವಿದೇಶಗಳಲ್ಲಿ ಅನಿವಾಸಿ ಕನ್ನಡಿಗರು ಮಾಡುತ್ತಾರೆ. ಹವ್ಯಾಸಿ ರಂಗ ಭೂಮಿ ಕೂಡ ವೃತ್ತಿಪರ ರಂಗಭೂಮಿಯಂತೆ ಮುನ್ನಡೆ ಯುತ್ತಿದೆ. ಸಾಮಾಜಿಕವಾಗಿ ಕಂಠಕರಹಿತವಾದ ಹುಚ್ಚು ಇರಬೇಕು. ಸಮಾಜಕ್ಕೆ ಉಪಯೋಗವಾಗದ್ದನ್ನು ಸಾಧಿಸಿ ತೋರಿಸಬೇಕು. ಪ್ರತಿಯೊಬ್ಬರೂ ಸಾಂಸ್ಕೃತಿಕ ರಾಯಭಾರಿಯಾಗಬೇಕು ಎಂದು ಮುಖ್ಯಮಂತ್ರಿ ಚಂದ್ರು ಕರೆ ನೀಡಿದರು.
ಕನ್ನಡದ ಕೊಂಡಿ ಪಯ್ಯಾರ್
‘ದುಬೈನಲ್ಲಿ ಧ್ವನಿ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್, ಪ್ರಕಾಶ್ ರಾವ್ ಪಯ್ಯಾರ್ ಅವರ ರಂಗ-ಸಾಹಿತ್ಯ ಕೆಲಸವನ್ನು ಸರಕಾರ ಗುರುತಿಸುವಂತಾಗಬೇಕು. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕನ್ನಡದ ಕಂಪನ್ನು ಪಸರಿಸಿದ ಕನ್ನಡಿಗ ಇವರಾಗಿದ್ದಾರೆ. ವಿದೇಶದಲ್ಲಿ ಕನ್ನಡವನ್ನು ಕಳಕೊಂಡ ಅನುಭವ ಸಹಜ. ಹಾಗಾಗಿ ಅಲ್ಲಿನ ಅನಿವಾಸಿ ಕನ್ನಡಿಗರು ಕನ್ನಡವನ್ನು ಪ್ರಚುರಪಡಿಸುವ ಕೆಲಸ ಮಾಡುತ್ತಿದ್ದಾರೆ. ಕರಾವಳಿ ಮತ್ತು ಗಲ್ಫ್ ರಾಷ್ಟ್ರದ ಕೊಂಡಿಯಾಗಿ ಪಯ್ಯಾರರು ಕನ್ನಡದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪ್ರಶಸ್ತಿ ಪ್ರದಾನ: ಈ ಸಂದರ್ಭ ಹಿರಿಯ ರಂಗಕರ್ಮಿ ಡಾ.ಬಿ.ವಿ.ರಾಜಾರಾಂ ಅವರಿಗೆ ಧ್ವನಿ ಶ್ರೀರಂಗ ಅಂತಾರಾಷ್ಟ್ರೀಯ ರಂಗ ಪ್ರಶಸ್ತಿ ಹಾಗೂ ಸಾಹಿತಿ, ವಿಮರ್ಶಕ ಮನೋಹರ್ ತೋನ್ಸೆ ಅವರಿಗೆ ಧ್ವನಿ ಅಂತಾರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಪ್ರಶಸ್ತಿ ಪ್ರದಾನ ನೆರವೇರಿಸಿದರು.
ವಿಧಾನ ಸಭೆಯ ವಿಪಕ್ಷ ಉಪನಾಯಕ, ಶಾಸಕ ಯು.ಟಿ.ಖಾದರ್, ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಉದ್ಯಮಿ ಎರ್ಮಾಳ್ ಹರೀಶ್ ಶೆಟ್ಟಿ, ಡಾ.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಮಿಕ್ಸ್‌ನ ಶ್ರೀನಿವಾಸ ಶ್ರೀರಂಗಂ ಉಪಸ್ಥಿತರಿದ್ದರು.
ಧ್ವನಿ ಪ್ರತಿಷ್ಠಾನ ದುಬೈ ಇದರ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಜಯಂತ್ ಶೆಟ್ಟಿ ವಂದಿಸಿದರು. ಮಂಗಳೂರು ಘಟಕ ಕಾರ್ಯದರ್ಶಿ ಅವನೀಶ್ ಭಟ್, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಕಲಾಗಂಗೋತ್ರಿ ಅಭಿನಯದ ಜನಪ್ರಿಯ ನಾಟಕ, ಡಾ. ಮುಖ್ಯಮಂತ್ರಿ ಚಂದ್ರು ಅವರು ಮುಖ್ಯಪಾತ್ರದ ಅಭಿನಯದಲ್ಲಿ ‘ಮುಖ್ಯಮಂತ್ರಿ’ ಕನ್ನಡ ನಾಟಕ ಪ್ರದರ್ಶನಗೊಂಡಿತು.
ಈ ಸಂದರ್ಭ ಅನಿವಾಸಿ ಸಾಧಕ ಕನ್ನಡಿಗರಾದ ಸರ್ವೋತ್ತಮ ಶೆಟ್ಟಿ ಅಬುದಾಭಿ, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಜೇಮ್ಸ್ ಮೆಂಡೋನ್ಸಾ ದುಬೈ, ಜೋಸೆಫ್ ಮಥಾಯಿಸ್ ದುಬೈ, ಡಾ.ಎಂ.ರವಿ ಶೆಟ್ಟಿ ಕತಾರ್, ಡಾ.ನಿತ್ಯಾನಂದ ದುಬೈ, ಸುಧಾಕರ ರಾವ್ ಪೇಜಾವರ ದುಬೈ ಇವರನ್ನು ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್ ಹಾಗೂ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಗೌರವಿಸಿದರು.
ಕಥಾ ಸ್ಪರ್ಧೆಯಲ್ಲಿ ವಿಜೇತ ಕನಕದಾಸ ಬಾಲಸುಬ್ರಹ್ಮಣ್ಯ ಸೌದಿ, ಡಾ.ಪ್ರೇಮಲತಾ ಇಂಗ್ಲೆಂಡ್, ಇರ್ಷಾದ್ ಮೂಡುಬಿದಿರೆ, ರಜನಿ ಭಟ್ ಅಬುದಾಭಿ, ಡಾ.ಪವಿತ್ರ ನಾಗರಾಜ್, ಯಶೋದಾ ಭಟ್ ದುಬೈ ಇವರಿಗೆ ಪ್ರಶಂಸಾ ಪತ್ರ ನೀಡಲಾಯಿತು.