ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ವಿವಾದಾತ್ಮಕ ಸುದ್ದಿಪತ್ರಿಕೆ ವಿತರಣೆ: ಲೈಸೆನ್ಸ್‌ದಾರನಿಗೆ ಐಆರ್‌ಸಿಟಿಸಿ ಎಚ್ಚರಿಕೆ

ಹೊಸದಿಲ್ಲಿ,ಎ.23: ಚೆನ್ನೈನಿಂದ ಬೆಂಗಳೂರಿಗೆ ಪ್ರಯಾಣಿಸುವ ಶತಾಬ್ಧಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ವಿವಾದಾತ್ಮಕ ಲೇಖನಗಳನ್ನು ಒಳಗೊಂಡ ಅನಧಿಕೃತ ಪತ್ರಿಕೆಯೊಂದರ ಪ್ರತಿಗಳನ್ನು ವಿತರಿಸಿರುವುದು ವಿವಾದಕ್ಕೆ ಗ್ರಾಸವಾಗಿದೆ.
ಬೆಂಗಳೂರು ಮೂಲದ ‘ಆರ್ಯಾವರ್ತ ಎಕ್ಸ್‌ಪ್ರೆಸ್’ ಇಂಗ್ಲೀಷ್ ಪತ್ರಿಕೆಯು ‘ಇಸ್ಲಾಮಿಕ್ ಆಳ್ವಿಕೆಯಲ್ಲಿ ಹಿಂದೂಗಳು , ಸಿಖ್ಖರು, ಬೌದ್ಧರು ನರಮೇಧವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ ’ ಹಾಗೂ ‘ಔರಂಗಜೇಬನನ್ನು ಹಿಟ್ಲರ್‌ನ ಹಾಗೆ ಜನಾಂಗೀಯ ಹತ್ಯಾಕಾಂಡದ ಪ್ರವರ್ತಕ’ ಎಂಬ ಲೇಖನಗಳನ್ನು ತನ್ನ ಮುಖಪುಟದಲ್ಲಿ ಪ್ರಕಟಿಸಿತ್ತು.
ವಿವಾದಿತ ಪತ್ರಿಕೆಯ ಪ್ರತಿಗಳನ್ನು ರೈಲಿನಲ್ಲಿ ವಿತರಿಸಲಾಗುವ ಇತರ ಅನುಮೋದಿತ ದಿನಪತ್ರಿಕೆಗಳ ಜೊತೆ ಪೂರಕ ಪ್ರತಿಯಾಗಿ ಇರಿಸಲಾಗಿತ್ತು ಎಂದು ರೈಲಿನಲ್ಲಿ ಪತ್ರಿಕೆಯನ್ನು ವಿತರಿಸುವ ಲೈಸೆನ್ಸ್ ಹೊಂದಿರುವವರಾದ ಪಿ.ಕೆ. ಶರೀಫ್ ಅವರು ಹೇಳಿದ್ದಾರೆ.
‘ಸುದ್ದಿಪತ್ರಿಕೆಗಳನ್ನು ವಿತರಿಸುತ್ತಿದ್ದ ನಮ್ಮ ಹುಡುಗರಿಗೆ, ಸುದ್ದಿಪತ್ರಿಕೆಗಳಲ್ಲಿ ಈ ವಿವಾದಿತ ಪತ್ರಿಕೆಯನ್ನು ಪೂರಕ ಪ್ರತಿಯಾಗಿ ಸೇರಿಸಿಡಲಾಗಿತ್ತು ಎಂಬುದು ತಿಳಿದಿರಲಿಲ್ಲ. ಅವರು ತಾವು ವಿತರಿಸುವ ಪತ್ರಿಕೆಯಲ್ಲಿರುವ ವಿಷಯಗಳನ್ನು ಓದುವುದಿಲ್ಲ ಎಂದವರು ಹೇಳಿದ್ದಾರೆ. ತಾನು ಅವರಿಗೆ ಮುಖ್ಯ ಪತ್ರಿಕೆಯನ್ನು ಹೊರತುಪಡಿಸಿ, ಬೇರೆ ಯಾವುದೇ ಕರಪತ್ರಗಳನ್ನು, ಪೂರಕ ಪತ್ರಿಕೆಗಳನ್ನು ವಿತರಿಸಕೂಡದೆಂದು ಸೂಚನೆ ನೀಡಿದ್ದೇನೆಂದು ಶಫಿ ತಿಳಿಸಿದ್ದಾರೆ.
ಆದರೆ ವಿವಾದಿತ ಪತ್ರಿಕೆಯನ್ನು ಬೇರೆ ಪತ್ರಿಕೆಯೊಳಗೆ ಲಗತ್ತಿಸಿರಲಿಲ್ಲ, ಅದು ಪ್ರತ್ಯೇಕವಾಗಿಯೇ ಲಭಿಸಿತ್ತು ಎಂದು ಅದನ್ನು ಪತ್ತೆ ಹಚ್ಚಿದ ಪ್ರಯಾಣಿಕರಾದ ಗೋಪಿಕಾ ಬಕ್ಷಿ ಟ್ವೀಟ್ ಮಾಡಿದ್ದಾರೆ.
ಐಆರ್‌ಸಿಟಿಸಿ ಆಡಳಿತ ನಿರ್ದೇಶಕ ಹಾಗೂ ಚೇರ್‌ಮನ್ ರಾಜಾ ಹಸೀಜಾ ಅವರು ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ ‘‘ನಾವು ಈಗಾಗಲೇ ಲೈಸನ್ಸ್ ದಾರನಿಗೆ ಎಚ್ಚರಿಕೆ ನೀಡಿದ್ದೇವೆ. ಒಪ್ಪಂದದದ ಪ್ರಕಾರ ಲೈಸನ್ಸ್‌ದಾರನು ಡೆಕ್ಕನ್ ಹೆರಾಲ್ಡ್ ಹಾಗೂ ಕನ್ನಡ ಪತ್ರಿಕೆಯ ಸೌಜನ್ಯ ಪ್ರತಿಗಳನ್ನು ಮಾತ್ರ ವಿತರಿಸಬಹುದಾಗಿದೆ ಎಂದು ತಿಳಿಸಿದ್ದಾರೆ.







