ಪಾಕಿಸ್ತಾನದ ಶೈಕ್ಷಣಿಗೆ ಪದವಿಗಳಿಗೆ ಭಾರತದಲ್ಲಿ ಮಾನ್ಯತೆಯಿಲ್ಲ: ಯುಜಿಸಿ,ಎಐಸಿಟಿಇ ಸ್ಪಷ್ಟನೆ

ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ,ಎ.24 : ಪಾಕಿಸ್ತಾನದ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸದಂತೆ ಭಾರತೀಯ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (ಎಐಸಿಟಿಇ) ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಪಾಕಿಸ್ತಾನದ ಪದವಿ ಕಾಲೇಜುಗಳಿಗೆ ದಾಖಲಾದವರು ಅಂತಹ ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ಭಾರತದಲ್ಲಿ ಯಾವುದೇ ಉದ್ಯೋಗಕ್ಕೆ ಅಥವಾ ಉನ್ನತ ಶಿಕ್ಷಣವನ್ನು ಕೈಗೊಳ್ಳಲು ಅರ್ಹತೆಯನ್ನು ಪಡೆದಿರುವುದಿಲ್ಲ’’ ಎಂದು ಹೇಳಿಕೆ ತಿಳಿಸಿದೆ.
‘‘2021ರ ಜುಲೈ 22ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬಿಡುಗಡೆಗೊಳಿಸಿದ ದತ್ತಾಂಶಗಳ ಪ್ರಕಾರ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ 11,33,749 ಭಾರತೀಯ ವಿದ್ಯಾರ್ಥಿಗಳ ಪೈಕಿ 230 ಮಂದಿ ಪಾಕಿಸ್ತಾನದವರು’’ ಎಂದು ಹೇಳಿಕೆ ತಿಳಿಸಿದೆ. ಆದಾಗ್ಯೂ ಭಾರತದಲ್ಲಿ ಪೌರತ್ವವನ್ನು ಪಡೆದಂತಹ ವಲಸಿಗರು ಹಾಗೂ ಅವರ ಮಕ್ಕಳಿಗೆ ಈ ನಿರ್ಬಂಧಗಳಲ್ಲಿ ಸಡಿಲಿಕೆಯನ್ನು ಮಾಡಲಾಗುವುದು. ಕೇಂದ್ರ ಗೃಹ ಸಚಿವಾಲಯದಿಂದ ಭದ್ರತಾ ಅನುಮೋದನೆ ದೊರೆತ ಬಳಿಕ ಅವರು ಭಾರತದಲ್ಲಿ ಉದ್ಯೋಗಾವಕಾಶ ಕೋರಲು ಅರ್ಹರಾಗಲಿದ್ದಾರೆಂದು ಎಂದು ಯುಜಿಸಿ ಹಾಗೂ ಎಐಸಿಟಿಇ ಹೇಳಿಕೆಯಲ್ಲಿ ತಿಳಿಸಿದೆ.