ಭಾರತೀಯ ಹಜ್ ಸಮಿತಿ ಅಧ್ಯಕ್ಷರಾಗಿ ಎ.ಪಿ.ಅಬ್ದುಲ್ಲಾ ಕುಟ್ಟಿ ನೇಮಕ
ಉಪಾಧ್ಯಕ್ಷ ಹುದ್ದೆಗೆ ಮುನಾವರಿ ಬೇಗಂ, ಮಾಫುಝಾ ಖಾತೂನ್ ಆಯ್ಕೆ
ಹೊಸದಿಲ್ಲಿ,ಎ.23: ಕೇರಳದ ಬಿಜೆಪಿ ಮುಖಂಡ ಎ.ಪಿ.ಅಬ್ದುಲ್ಲಾ ಕುಟ್ಟಿ ಅವರನ್ನು ಭಾರತೀಯ ಹಜ್ ಸಮಿತಿಯ ಅಧ್ಯಕ್ಷರಾಗಿ ಶುಕ್ರವಾರ ಆಯ್ಕೆ ಮಾಡಲಾಗಿದೆ. ಬಿಜೆಪಿ ನಾಯಕಿಯರಾದ ಮುನಾವರಿ ಬೇಗಂ ಹಾಗೂ ಮಾಫುಝಾ ಖಾತೂನ್ ಅವರನ್ನು ಉಪಾಧ್ಯಕ್ಷರುಗಳನ್ನಾಗಿ ನೇಮಿಸಲಾಗಿದೆ.
ಹಜ್ ಸಮಿತಿಯಲ್ಲಿ ಉಪಾಧ್ಯಕ್ಷರಂತಹ ಉನ್ನತ ಪದವಿಯನ್ನು ಮಹಿಳೆಯರು ಆಲಂಕರಿಸಿರುವುದು ಇದೇ ಮೊದಲ ಸಲವಾಗಿದೆ.ಮುನಾವರಿ ಬೇಗಂ ಅವರು ಎರಡು ದಶಕಗಳಿಗೂ ಅಧಿಕ ಸಮಯದಿಂದ ಬಿಜೆಪಿಯಲ್ಲಿದ್ದಾರೆ. ಅಬ್ದುಲ್ಲಾ ಕುಟ್ಟಿ ಹಾಗೂ ಖಾತೂನ್ ತೀರಾ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡವರಾಗಿದ್ದಾರೆ ಇವರಿಬ್ಬರು ಈ ಮೊದಲು ಸಿಪಿಎಂ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಆಲಂಕರಿಸಿದ್ದರು.
ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾದ ಅಬ್ದುಲ್ಲಾ ಕುಟ್ಟಿ ಅವರು ತನ್ನ ರಾಜಕೀಯ ಬದುಕನ್ನು ಸಿಪಿಎಂನ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್‌ನಿಂದ ಆರಂಭಿಸಿದ್ದರು. 1998ರಲ್ಲಿ ಅವರು ಎಸ್‌ಎಫ್‌ಐನ ಕೇರಳ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಅಬ್ದುಲ್ಲಾ ಕುಟ್ಟಿ ಅವರು ಕಣ್ಣೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾಗಿದ್ದರು. 1999 ಲೋಕಸಭಾ ಚುನಾವಣೆಯಲ್ಲಿ ಕಣ್ಣೂರು ಕ್ಷೇತ್ರದಿಂದ ಅವರು ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಆಗಿನ ಕೇರಳ ಕಾಂಗ್ರೆಸ್ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರನ್ನು ಪರಾಭವಗೊಳಿಸಿದ್ದರು. 2004ರ ಚುನಾವಣೆಯಲ್ಲೂ ಅವರು ಮುಲ್ಲಪ್ಪಳ್ಳಿ ವಿರುದ್ಧ ಗೆಲುವು ಸಾಧಿಸಿದ್ದರು.ಕಣ್ಣೂರು ಲೋಕಸಭಾ ಕ್ಷೇತ್ರವು ಶೇ.30ರಷ್ಟು ಮುಸ್ಲಿಂ ಮತದಾರರನ್ನು ಹೊಂದಿದೆ.
2009ರಲ್ಲಿ ಅಬ್ದುಲ್ಲಾ ಕುಟ್ಟಿ ಅವರಿಗೆ ಸಿಪಿಎಂ ನಾಯಕತ್ವದ ಜೊತೆ ಭಿನ್ನಾಭಿಪ್ರಾಯದಿಂದಾಗಿ ಪಕ್ಷ ತೊರೆದಿದ್ದರು. ನರೇಂದ್ರ ಮೋದಿಯವರ ಗುಜರಾತ್ ಮಾದರಿಯನ್ನು ಶ್ಲಾಘಿಸಿದ್ದುದು ಇದಕ್ಕೆ ಕಾರಣವಾಗಿತ್ತು.
ಸಿಪಿಎಂನಿಂದ ಉಚ್ಚಾಟನೆಗೊಂಡ ಬಳಿಕಅಬ್ದುಲ್ಲಾ ಕುಟ್ಟಿ ಅವರು ಆ ವರ್ಷವೇ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. 2016ರವರೆಗೂ ಅವರು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. 2016ರ ವಿಧಾನಸಭಾ ಚುನಾವಣೆಯಲ್ಲಿ ತಲಶ್ಶೇರಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದರು. ಮೂರು ವರ್ಷಗಳ ಬಳಿಕ ಅವರು ಬಿಜೆಪಿಗೆ ಸೇರ್ಪಡೆಗೊಂಡರು.
ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್‌ಪುರ ಜಿಲ್ಲೆಯಲ್ಲಿ ಕುಮಾರ್‌ಗಂಜ್ ಕ್ಷೇತ್ರದಲ್ಲಿ ಎರಡು ಬಾರಿ ಸಿಪಿಎಂ ಶಾಸಕಿಯಾಗಿದ್ದ ಮಾಫುಝಾ ಖಾತೂನ್ ಅವರು 2017ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಪಕ್ಷಕ್ಕೆ ಸೇರ್ಪಡೆಗೊಂಡ ಆರೇ ತಿಂಗಳುಗಳಲ್ಲಿ ಬಿಜೆಪಿ ಆಕೆಯ ಸಂಘಟನಾ ನೈಪುಣ್ಯತೆಯನ್ನು ಪರಿಗಣಿಸಿತು ಹಾಗೂ ರಾಜ್ಯದ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷೆಯ ಸ್ಥಾನಕ್ಕೆ ಅವರನ್ನು ನಿಯೋಇಸಿತು. ಪ್ರಸ್ತುತ ಅವರು ಬಿಜೆಪಿಯ ಪ.ಬಂಗಾಳ ಘಟಕದ ಉಪಾಧ್ಯಕ್ಷೆಯಾಗಿದ್ದು, ಈ ಹುದ್ದೆಯನ್ನು ಆಲಂಕರಿಸಿದ ಪ್ರಪ್ರಥಮ ಮುಸ್ಲಿಂ ಮಹಿಳೆಯಾಗಿದ್ದಾರೆ.
ತನ್ನ ಹರಿತವಾದ ಭಾಷಣಗಳಿಂದ ಹೆಸರುವಾಸಿಯಾಗಿರುವ ಖಾತೂನ್‌ಅವರು ದಿನಾಜ್‌ಪುರ ಹಾಗೂ ಮುರ್ಶಿಬಾದ್ ಜಿಲ್ಲೆಗಳಲ್ಲಿರುವ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಅಪಾರ ಜನಪ್ರಿಯತೆಯನ್ನು ಹೊಂದಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಮುರ್ಶಿದಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಟಿಎಂಸಿ ಅಭ್ಯರ್ಥಿಯ ಎದುರು ಸೋಲುಂಡಿದ್ದರು.







