ಮಂಗಳೂರು: ಶಾಲಾ ಬಾಲಕಿಗೆ ಮೊಬೈಲ್ ನಂಬರ್ ನೀಡಿದ ಬಸ್ ನಿರ್ವಾಹಕ ಸೆರೆ

ಮಂಜುನಾಥ್
ಮಂಗಳೂರು : ಶಾಲಾ ವಿದ್ಯಾರ್ಥಿನಿಗೆ ಬಸ್ನ ಟಿಕೆಟ್ ಜೊತೆ ಮೊಬೈಲ್ ನಂಬರ್ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸ್ ನಿರ್ವಾಹಕ, ಬಾಗಲಕೋಟೆ ಗುಳೇದಗುಡ್ಡ ಲಿಂಗಾಪುರ ನಿವಾಸಿ ಮಂಜುನಾಥ್ (21) ಎಂಬಾತನನ್ನು ಮಹಿಳಾ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಸ್ಟೇಟ್ಬ್ಯಾಂಕ್-ಬೊಂದೇಲ್ ನಡುವಿನ ರೂಟ್ ನಂಬ್ರ 19ರ ಕೆನರಾ ಬಸ್ನಲ್ಲಿ 8ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳು ಪ್ರಯಾಣಿಸುತ್ತಿದ್ದಾಗ ಬಸ್ ನಿರ್ವಾಹಕ ಮಂಜುನಾಥ್ ಆಕೆಗೆ ತನ್ನ ಮೊಬೈಲ್ ನಂಬರ್ ನೀಡಿದ್ದಾನೆ ಎನ್ನಲಾಗಿದೆ. ಈ ವಿಷಯವನ್ನು ವಿದ್ಯಾರ್ಥಿನಿ ಮನೆಯಲ್ಲಿ ತಾಯಿಗೆ ತಿಳಿಸಿದ್ದಳು.
ಬಸ್ ನಿರ್ವಾಹಕನ ದುರ್ವರ್ತನೆಗೆ ಆಕ್ರೋಶಗೊಂಡ ಹೆತ್ತವರು, ಸಂಬಂಧಿಕರು ನಿನ್ನೆ ರಾತ್ರಿ ಬಸ್ಸನ್ನು ತಡೆದು ನಿಲ್ಲಿಸಿ ಕಂಡಕ್ಟರ್ನನ್ನು ಕೆಳಗಿಳಿಸಿ ಹಲ್ಲೆಗೈದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವಿದ್ಯಾರ್ಥಿನಿಯು ಮೊದಲ ಬಾರಿ ಈ ಬಸ್ನಲ್ಲಿ ಪ್ರಯಾಣಿಸಿದ್ದರು ಎನ್ನಲಾಗಿದೆ. ಆಗಲೇ ಆರೋಪಿ ನಂಬರ್ ಕೊಟ್ಟು ಬಳಿಕ ಆಕೆಯ ತಾಯಿಯಿಂದ ಹಲ್ಲೆಗೊಳಗಾಗಿದ್ದಾನೆ.
ಆರೋಪಿಯು ಈ ಹಿಂದೆ ಕೂಡ ಇಂತಹ ದುರ್ವರ್ತನೆ ತೋರಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಆರೋಪಿಯನ್ನು ಮಹಿಳಾ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದಾರೆ. ನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.