ಉಡುಪಿ ಮಠದಬೆಟ್ಟು ಸೇತುವೆ ನಿರ್ಮಾಣ ಕಾಮಗಾರಿ; ತ್ಯಾಜ್ಯ ನೀರಿನಿಂದ 30ಕ್ಕೂ ಅಧಿಕ ಬಾವಿಗಳ ನೀರು ಕಲುಷಿತ
ನಗರಸಭೆ ವಿರುದ್ಧ ಸ್ಥಳೀಯರ ಆಕ್ರೋಶ

ಉಡುಪಿ : ನಗರದ ಮಧ್ಯಭಾಗದಲ್ಲಿ ಹರಿಯುವ ಇಂದ್ರಾಳಿ ಹೊಳೆಗೆ ಮಠದಬೆಟ್ಟುವಿನಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಗಾಗಿ ತ್ಯಾಜ್ಯ ನೀರನ್ನು ತಡೆಹಿಡಿದ ಪರಿಣಾಮ ಈ ಪರಿಸರದ ಸುಮಾರು 30ಕ್ಕೂ ಅಧಿಕ ಮನೆಗಳ ಬಾವಿಗಳು ಕಲುಷಿತಗೊಂಡಿವೆ.
ಉಡುಪಿ ನಗರಸಭಾ ವ್ಯಾಪ್ತಿಯ ಬನ್ನಂಜೆ ವಾರ್ಡಿನ ಮಠದಬೆಟ್ಟು ಎಂಬಲ್ಲಿ ಇಂದ್ರಾಣಿ ಹೊಳೆಗೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಿಸಲು ಪಶ್ಚಿಮ ವಾಹಿನಿ ಯೋಜನೆಯಡಿ ಒಂದು ಕೋಟಿ ರೂ. ಅನುದಾನ ಮಂಜೂರಾಗಿದ್ದು, ಅದರಂತೆ ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿದೆ.
ಅದಕ್ಕಾಗಿ ಹೊಳೆಗೆ ಮಣ್ಣು ಹಾಕಿ ನೀರನ್ನು ತಡೆ ಹಿಡಿಯಲಾಗಿದೆ. ಇನ್ನೊಂದೆಡೆ ನಗರಸಭೆಯಿಂದ ಡ್ರೈನೇಜ್ ನೀರನ್ನು ಇದೇ ಹೊಳೆಗೆ ಬಿಡಲಾಗುತ್ತಿದೆ. ಇದರಿಂದ ಸೇತುವೆ ನಿರ್ಮಾಣದ ಪ್ರದೇಶದಲ್ಲಿ ಡ್ರೈನೇಜ್ ನೀರು ಸಂಗ್ರಹ ಗೊಂಡಿದೆ. ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೊಳೆಯ ನೀರು ಹೆಚ್ಚಾಗಿ, ತ್ಯಾಜ್ಯ ನೀರು ಹೊಳೆಯನ್ನು ಸಂಪರ್ಕಿಸುವ ತೋಡುಗಳಲ್ಲಿ ಹರಿಯುತ್ತಿದೆ.
ಇದರ ಪರಿಣಾಮವಾಗಿ ಮಠದಬೆಟ್ಟು ಪರಿಸರದ ಸುಮಾರು 30ಕ್ಕೂ ಅಧಿಕ ಮನೆಗಳ ಬಾವಿಯ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿ ಮಲೀನ ಗೊಂಡಿವೆ. ಬಾವಿಯ ನೀರಿನಲ್ಲಿ ತ್ಯಾಜ್ಯ ನೀರು ಸೇರಿರುವುದರಿಂದ ನೀರಿನ ಮಟ್ಟ ಕೂಡ ಜಾಸ್ತಿಯಾಗಿದೆ. ಬೇಸಿಗೆಯಲ್ಲಿ ನಗರಸಭೆ ನೀರು ಬಾರದೆ ಇದ್ದಾಗ ಸ್ಥಳೀಯರು ತಮ್ಮ ಬಾವಿಯ ನೀರನ್ನು ಬಳಸುತ್ತಿದ್ದರು. ಆದರೆ ಈ ಬಾರಿ ತ್ಯಾಜ್ಯ ನೀರಿನಿಂದಾಗಿ ಬಾವಿಯ ನೀರು ದಿನಬಳಕೆಗೆ ಅಯೋಗ್ಯವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗಬ್ಬು ನಾತ, ಸೊಳ್ಳೆ ಕಾಟ
ಹೊಳೆಯಲ್ಲಿ ತ್ಯಾಜ್ಯ ನೀರು ಸಂಗ್ರಹದ ಪರಿಣಾಮ ಇಡೀ ಪರಿಸರ ಗಬ್ಬು ವಾಸನೆಯಿಂದ ಮಾಲಿನ್ಯಗೊಂಡಿವೆ. ಜನ ಮೂಗು ಮುಚ್ಚಿಕೊಂಡೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಕಳೆದ ಒಂದು ವಾರದಿಂದ ಸೊಳ್ಳೆ ಕಾಟ ವಿಪರೀತವಾಗಿದೆ ಎಂದು ಸ್ಥಳೀಯರಾದ ಆಶಾ ಅಮೀನ್ ದೂರಿದರು.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಳ್ಳದಿದ್ದರೆ ಕಳೆದ ಬಾರಿ ಯಂತೆ ಈ ಬಾರಿಯು ಕೃತಕ ನೆರೆ ಇಡೀ ಪರಿಸರವನ್ನೇ ಮುಳುಗಿಸಲಿದೆ. ಕ್ಲೀನ್ ಸಿಟಿ ಎಂಬ ಕಾರಣಕ್ಕೆ ಪ್ರಶಸ್ತಿ ಪಡೆದಿರುವ ಉಡುಪಿ ನಗರಸಭೆ ವ್ಯಾಪ್ತಿಯಲ್ಲೇ ಈ ರೀತಿಯ ಅವ್ಯವಸ್ಥೆ ಕಂಡುಬಂದಿದೆ. ಅದು ಕೂಡ ನಗರದ ಮಧ್ಯ ಭಾಗದ ನಮ್ಮ ನರಕಯಾತನೆ ಬಗ್ಗೆ ಯಾರು ಕೇಳುತ್ತಿಲ್ಲ. ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ಚುನಾವಣೆಯನ್ನು ನಾವೆಲ್ಲ ಬಹಿಷ್ಕರಿಸುವ ತೀರ್ಮಾನ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಬಾವಿಯ ನೀರು ಮಲೀನಗೊಂಡ ಪರಿಣಾಮ ಪರಿಸರದ ಹಲವರಿಗೆ ವಿವಿಧ ಕಾಯಿಲೆಗಳು ಕಂಡುಬಂದಿದೆ. ಮಕ್ಕಳು ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸೊಳ್ಳೆಯಿಂದ ರಾತ್ರಿ ಮಲಗಲು ಕೂಡ ಆಗುತ್ತಿಲ್ಲ. ಒಂದೆರೆಡು ಮಳೆಯಲ್ಲಿ ಹೊಳೆಯ ನೀರಿನ ಮಟ್ಟ ಹೆಚ್ಚಾಗಿದ್ದು, ಮುಂದೆ ನಿರಂತರ ಮಳೆ ಬಂದರೆ ಈ ಮಲೀನ ನೀರು ಮನೆಗಳ ಒಳಗೆ ನುಗ್ಗುವ ಅಪಾಯವಿದೆ ಎಂದು ಸ್ಥಳೀಯ ರಾದ ರಾಘವೇಂದ್ರ ಮಠದಬೆಟ್ಟು ಆರೋಪಿಸಿದರು.
ಅವೈಜ್ಞಾನಿಕ ಸೇತುವೆ ಕಾಮಗಾರಿ: ಆರೋಪ
ಈ ಎಲ್ಲ ಸಮಸ್ಯೆಗಳಿಗೆ ಗುತ್ತಿಗೆದಾರರು ನಡೆಸುತ್ತಿರುವ ಸೇತುವೆಯ ಅವೈಜ್ಞಾನಿಕ ಕಾಮಗಾರಿಯೇ ಮುಖ್ಯ ಕಾರಣ ಎಂದು ಮಠದಬೆಟ್ಟು ಪರಿಸರದ ಜನತೆ ಆರೋಪಿಸಿದ್ದಾರೆ.
‘ಇಷ್ಟು ದೊಡ್ಡ ಹೊಳೆಗೆ ಮಣ್ಣು ಹಾಕಿ ಕಟ್ಟ ಹಾಕಿದ್ದು, ಅಲ್ಲಿನ ನೀರು ಹರಿದು ಹೋಗಲು ಕೇವಲ ನಾಲ್ಕು ಇಂಚಿನ ಪೈಪನ್ನು ಹಾಕಿದ್ದಾರೆ. ಇದರಿಂದ ನೀರು ಸರಿಯಾಗಿ ಹರಿದುಹೋಗುತ್ತಿಲ್ಲ. ಈ ರೀತಿಯ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಹೊಳೆಯಲ್ಲಿ ನೀರು ಸಂಗ್ರಹಗೊಂಡು, ಕೈತೋಡಿನ ಮೂಲಕ ಹರಿದು ಮನೆಗಳ ಬಾವಿಗಳನ್ನು ಸೇರುತ್ತಿವೆ. ಈ ಬಗ್ಗೆ ನಗರಸಭೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯರಾದ ಪ್ರವೀಣ್ ಮೆಂಡನ್ ಆರೋಪಿಸಿದರು.