ಅಲೆಮಾರಿ ಬುಡಕಟ್ಟು (ಶಿಳ್ಳೆಕ್ಯಾತ) ಸಮುದಾಯದ ಹಕ್ಕೊತ್ತಾಯ ಸಮಾವೇಶ

ಮಂಗಳೂರು : ಕರಾವಳಿ ವೃತ್ತಿನಿರತ ಅಲೆಮಾರಿ (ಶಿಳ್ಳೆಕ್ಯಾತ) ಹಕ್ಕುಗಳ ಸಮಿತಿ ದ.ಕ.ಜಿಲ್ಲಾ ಘಟಕದ ಆಶ್ರಯ ದಲ್ಲಿ ನಗರದ ಕೊಡಿಯಾಲ್‌ಬೈಲ್‌ನ ಸಿಬಿಇಯು ಗೋಲ್ಡನ್ ಜ್ಯುಬಿಲಿ ಹಾಲ್‌ನಲ್ಲಿ ರವಿವಾರ ಹಕ್ಕೊತ್ತಾಯ ಸಮಾವೇಶ ನಡೆಯಿತು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಮಾನ್ಪಡೆ ಅಲೆಮಾರಿ (ಶಿಳ್ಳೆಕ್ಯಾತ), ಅದಿವಾಸಿ ಸಮುದಾಯ ಮನೆ, ಶಿಕ್ಷಣ, ಉದ್ಯೋಗ, ಆರೋಗ್ಯ ಸೌಲಭ್ಯಗಳಂತಹ ಕನಿಷ್ಟ ಮೂಲಭೂತ ಸೌಲಭ್ಯಗಳಿಗಾಗಿ ಹಲವು ದಶಕಗಳಿಂದ ಸರಕಾರಗಳ ಮುಂದೆ ನಿರಂತರ ಬೇಡಿಕೆಗಳನ್ನು ಮಂಡಿಸುತ್ತಾ ಬಂದಿವೆ. ಆದರೆ ಇದಕ್ಕೆ ಈವರೆಗೆ ಯಾವುದೇ ಸ್ಪಂದನೆ ದೊರಕಿಲ್ಲ. ಓಟ್‌ಬ್ಯಾಂಕ್ ರಾಜಕಾರಣದಲ್ಲಿ ಸಿಲುಕಿರುವ ಸರಕಾರಗಳು ಸಮಾಜದ ಕಟ್ಟಕಡೆಯ, ಸಣ್ಣ ಸಮುದಾಯಗಳನ್ನು ನಿರ್ಲಕ್ಷಿಸುತ್ತಾ ಬಂದಿವೆ. ಹಾಗಾಗಿ ಹಕ್ಕುಗಳಿಗಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುವ ಅವಶ್ಯಕತೆ ಇದೆ ಎಂದರು.
ನಮ್ಮ ಜೀವನಕ್ಕೆ ಅವಶ್ಯವಿರುವ ಕನಿಷ್ಠ ಮೂಲಸೌಕರ್ಯಗಳನ್ನು ನೀಡಲು ವಿಫಲವಾಗಿರುವ ಆಡಳಿತ ವ್ಯವಸ್ಥೆ ಯನ್ನು ಪ್ರಶ್ನಿಸಿ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಇದಕ್ಕೆ ಹೋರಾಟವೊಂದೇ ದಾರಿಯಾಗಿದೆ ಎಂದು ಡಾ. ಮಲ್ಲಿಕಾರ್ಜುನ ಮಾನ್ಪಡೆ ಹೇಳಿದರು
ಕರ್ನಾಟಕ ಅದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಹಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ ಮಾತನಾಡಿ ನಿರಂತರ ಶೋಷಣೆ, ದೌರ್ಜನಕ್ಕೆ ಒಳಗಾಗುತ್ತಾ ಬಂದಿರುವ ಅದಿವಾಸಿ, ಬುಡಕಟ್ಟು, ಅಲೆಮಾರಿ ಸಮುದಾಯ ಗಳು ಸಂಘಟಿತರಾಗಿ ನ್ಯಾಯಯುತ ಬೇಡಿಕೆಗಳನ್ನು ಪಡೆಯಲು ಮುಂದಾಗಬೇಕಿದೆ ಎಂದರು.
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕಾರ್ಮಿಕ ನಾಯಕ ಸುನಿಲ್ ಕುಮಾರ್ ಬಜಾಲ್, ಮಂಜುನಾಥ್, ನವೀನ್ ಕುಮಾರ್ ಅತಿಥಿಗಳಾಗಿದ್ದರು.
ಕರಾವಳಿ ವೃತ್ತಿನಿರತ ಅಲೆಮಾರಿ ಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷ ರವಿ ಟಿ.ಎನ್. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಘಟನೆಯ ಪ್ರಮುಖರಾದ ದಾಖಲಯ್ಯ, ನಾಗೇಶ್, ರಘು, ರಾಘವೇಂದ್ರ, ಸ್ವಾಮಿ, ಸುಶೀಲಮ್ಮ, ನಾಗೇಶ್ ತೋಕೂರು ಉಪಸ್ಥಿತರಿದ್ದರು.
ಸಮಿತಿಯ ಗೌರವಾಧ್ಯಕ್ಷ ಸಂತೋಷ್ ಬಜಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ವೆಂಕಟೇಶ ಎಸ್.ಸ್ವಾಗತಿಸಿದರು.ಶಿವಪ್ಪ ಕಣ್ಣೂರು ವಂದಿಸಿದರು. ಕೋಶಾಧಿಕಾರಿ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.