ಪಿಎಸ್ಸೈ ನೇಮಕಾತಿ ಹಗರಣಕ್ಕೆ ಗೃಹಸಚಿವರೇ ನೇರ ಹೊಣೆಗಾರರು: ಡಿ.ಕೆ.ಶಿವಕುಮಾರ್ ಆರೋಪ

ಚಿಕ್ಕಮಗಳೂರು, ಎ.24: ಪಿಎಸ್ಸೈ ನೇಮಕಾತಿ ಹಗರಣಕ್ಕೆ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರೇ ನೇರ ಹೊಣೆಗಾರರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ರವಿವಾರ ಕೊಪ್ಪ ತಾಲೂಕಿನ ಹರಿಹರಪುರ ಶ್ರೀಮಠದಲ್ಲಿ ಆಯೋಜಿಸಿರುವ ಮಹಾ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಿಎಸ್ಸೈ ನೇಮಕಾತಿ ಅಕ್ರಮವನ್ನು ಹೊರ ತೆಗೆದು ಜನರ ಗಮನಕ್ಕೆ ತಂದಿದ್ದೇ ಕಾಂಗ್ರೆಸ್. ಈ ಅಕ್ರಮದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು. ಪಿಎಸ್ಸೈ ನೇಮಕಾತಿ ಅಕ್ರಮಕ್ಕೂ ಕಾಂಗ್ರೆಸ್‍ಗೂ ಏನು ಸಂಬಂಧ, ರಾಜ್ಯದಲ್ಲಿರುವುದು ಬಿಜೆಪಿ ಸರಕಾರ ಅಲ್ಲವೇ? ಎಂದು ಪ್ರಶ್ನಿಸಿದರು.
ಪ್ರಕರಣದಲ್ಲಿ ಯಾರೋ ಗನ್‍ಮ್ಯಾನ್ ಇದ್ದ, ಮಾಜಿ ಬ್ಲಾಕ್ ಅಧ್ಯಕ್ಷ, ಇನ್ನೊಬ್ಬ ಎನ್ನುವುದಲ್ಲ. ಇದು ರಾಜ್ಯ ಸರಕಾರದ ಆಡಳಿತ ವೈಫಲ್ಯ. ಸರಕಾರದ ಅವ್ಯವಹಾರಗಳು ಒಂದೊಂದಾಗಿ ಹೊರ ಬರುತ್ತಿವೆ. ನೇಮಕಾತಿಯಲ್ಲಿ ಅವ್ಯವಹಾರ ನಡೆಸಿರುವುದು ಎಷ್ಟು ಸರಿ. ಬಿಜೆಪಿ ಇದನ್ನೇ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಆರೋಪಿಸಿದ ಅವರು, ಅಧೀವೇಶನದಲ್ಲಿ ಗೃಹಮಂತ್ರಿಗಳು ನಾನೇನು ಮಾಡಿಲ್ಲ ಎಂದು ಹೇಳಿ ನಂತರ ಹಗರಣವನ್ನು ಸಿಓಡಿ ತನಿಖೆಗೆ ನೀಡಿದ್ದೇಕೆ? ಇದಕ್ಕೆ ಗೃಹ ಸಚಿವರೇ ಜವಬ್ದಾರರು ಎಂದರು.
ಅಶ್ವಥ್ ನಾರಾಯಣ್, ಯೋಗಿಶ್ವರ್ ಸೇರಿದಂತೆ ಅನೇಕ ಶಾಸಕರು ತಮ್ಮ ಮನೆಗೆ ಹಣ ತಂದು ಕೊಟ್ಟರು ಎಂದು ಅಸೆಂಬ್ಲಿಯಲ್ಲೇ ಹೇಳಿದ್ದಾರೆ. ಈ ಭ್ರಷ್ಟ ಸರಕಾರದ ಜನ್ಮದಿನ ನಡೆಯುತ್ತಿದೆ. ಇಡೀ ಸರಕಾರ ಭ್ರಷ್ಟಚಾರದಲ್ಲಿ ಮುಳುಗಿದೆ ಎಂದು ಟೀಕಿಸಿದ ಅವರು, ಪ್ರತೀ ಕೆಲಸದಲ್ಲೂ 40 ಪಾರ್ಸೆಂಟ್ ಕಮೀಶನ್ ದಂಧೆ ನಡೆಯುತ್ತಿದೆ ಎಂದು ಡಿಕೆಶಿ ಟೀಕಿಸಿದರು.







