ಗ್ರಾಮೀಣಾಭಿವೃದ್ಧಿಗಾಗಿ ‘ವಿಷನ್ ಪ್ಲ್ಯಾನ್’ ರೂಪಿಸಿ: ಡಾ.ಹರೀಶ್ ಹಂದೆ
80 ಬಡಗಬೆಟ್ಟು ಗ್ರಾಪಂಗೆ ಕೆ.ಎಂ.ಉಡುಪ ಗ್ರಾಮ ಪುರಸ್ಕಾರ ಪ್ರದಾನ

ಉಡುಪಿ : ರಸ್ತೆ, ಕುಡಿಯುವ ನೀರು, ಸಾರಿಗೆ, ಶಿಕ್ಷಣ, ಕೃಷಿ ವಿಷಯ ದಲ್ಲಿ ಮುಂದಿನ ೧೦ ವರ್ಷಗಳಲ್ಲಿ ಗ್ರಾಮಗಳು ಯಾವ ರೀತಿ ಅಭಿವೃದ್ಧಿ ಹೊಂದ ಬೇಕೆಂಬ ಪರಿಕಲ್ಪನೆಯಡಿಯಲ್ಲಿ ‘ವಿಷನ್ ಪ್ಲ್ಯಾನ್’ ರೂಪಿಸಿ ಅಭಿವೃದ್ಧಿ ಚಟು ವಟಿಕೆ ಅನುಷ್ಠಾನಗೊಳಿಸಬೇಕು ಎಂದು ಮ್ಯಾಗ್ಗೆಸ್ಸೆ ಪ್ರಶಸ್ತಿ ಪುರಸ್ಕೃತ ಸೌರ ವಿಜ್ಞಾನಿ ಡಾ.ಹರೀಶ್ ಹಂದೆ ಅಭಿಪ್ರಾಯ ಪಟ್ಟಿದ್ದಾರೆ.
ಮಂದರ್ತಿ ಕೆ.ಎಂ.ಉಡುಪ ಟ್ರಸ್ಟ್ ಆಶ್ರಯದಲ್ಲಿ ಉಡುಪಿ ಜಿಪಂ ಸಹಕಾರ ದೊಂದಿಗೆ ರವಿವಾರ ಉಡುಪಿ ಜಿಪಂ ಸಭಾಂಗಣದಲ್ಲಿ ಆಯೋಜಿಸಲಾದ ಕೆ.ಎಂ.ಉಡುಪ ಗ್ರಾಮ ಪುರಸ್ಕಾರ -೨೦೨೨ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಮುಂದಿನ ೧೦ ವರ್ಷಗಳಲ್ಲಿ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿಯ ವಿಷನ್ ಪ್ಲ್ಯಾನ್‌ನ್ನು ರಚಿಸಿ ಅಭಿವೃದ್ಧಿ ಕಾರ್ಯಗಳನ್ನು ಮುನ್ನೆಡಸಲಾಗುವುದು ಎಂದು ಹೇಳಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತ ನಾಡಿ, ಗ್ರಾಪಂನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬಂದಿ ವರ್ಗ ಜನರೊಂದಿಗೆ ಪ್ರಾಮಾಣಿಕತನದಿಂದ ಆತ್ಮಿಯವಾಗಿ ಬೆರೆತು ಕಾರ್ಯನಿರ್ವಹಿಸ ಬೇಕು ಎಂದು ತಿಳಿಸಿದರು.
ಉಡುಪಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ನ್ಯೂಟ್ರಿಷನ್ ಅಂಡ್ ಫಿಸಿಯಾಲಜಿ ನಿರ್ದೇಶಕ ಡಾ.ರಾಘವೇಂದ್ರ ಭಟ್ ಮಾತನಾಡಿದರು. ಈ ಸಂದರ್ಭದಲ್ಲಿ ೮೦ ಬಡಗಬೆಟ್ಟು ಗ್ರಾಪಂಗೆ ಕೆ.ಎಂ ಉಡುಪ ಗ್ರಾಮ ಪುರಸ್ಕಾರ ವನ್ನು ಪ್ರದಾನ ಮಾಡಲಾಯಿತು. ಗ್ರಾಪಂ ಅಧ್ಯಕ್ಷೆ ಮಾಧವಿ ಆಚಾರ್ಯ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟಿ ಮಾಧವ ಉಡುಪ ಉಪಸ್ಥಿತರಿದ್ದರು. ಮೋಹನ್ ಉಡುಪ ಸ್ವಾಗತಿಸಿ ದರು. ಮಹೇಶ್ ಉಡುಪ ವಂದಿಸಿದರು. ಮಂಜುನಾಥ್ ಭಟ್ ಕಾರ್ಯಕ್ರಮ ನಿರೂಪಿಸಿದರು.
250 ಮಿಲಿಯನ್ ಟನ್ ಹಾಲು ಉತ್ಪಾದನೆ ಗುರಿ
ದೇಶದ ಆರ್ಥಿಕತೆಯಲ್ಲಿ ಪಶುಸಂಗೋಪನೆ, ಕ್ಷೀರ ಉತ್ಪಾದನೆ ತನ್ನದೆ ವಿಶಿಷ್ಟ ಕೊಡುಗೆ ನೀಡುತ್ತಿದೆ. ಹೈನುಗಾರಿಕೆಯಲ್ಲಿ ದೇಶಕ್ಕೆ ಹೋಲಿಸಿದಲ್ಲಿ ಕರ್ನಾಟಕ ಗಣನೀಯ ಸಾಧನೆ ಮಾಡಿದೆ. ಜಾಗತಿಕವಾಗಿ ಹಾಲು ಉತ್ಪಾದನೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಸ್ಥಳೀಯ ಬಳಕೆ, ರಫ್ತು, ಪೂರೈಕೆ ಬೇಡಿಕೆ ಸಹಿತ ಪ್ರಸ್ತುತ ೨೦೦ ಮಿಲಿಯನ್ ಟನ್ ಉತ್ಪಾದನೆಯಾಗುತ್ತಿದ್ದು, ೨೦೨೫ಕ್ಕೆ ದೇಶವು ೨೫೦ ಮಿಲಿಯನ್ ಟನ್ ಹಾಲು ಉತ್ಪಾದನೆ ಗುರಿಯನ್ನು ಹೊಂದಿದೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ನ್ಯೂಟ್ರಿಷನ್ ಅಂಡ್ ಫಿಸಿಯಾಲಜಿ ನಿರ್ದೇಶಕ ಡಾ.ರಾಘವೇಂದ್ರ ಭಟ್ ತಿಳಿಸಿದರು.







