ರಾಜ್‍ಕುಮಾರ್ ನಾಡಿನ ಸಾಂಸ್ಕೃತಿಕ ರಾಯಭಾರಿ: ಪ್ರೊ.ಬರಗೂರು ರಾಮಚಂದ್ರಪ್ಪ

ಬೆಂಗಳೂರು, ಎ. 24: ಚಿತ್ರನಟ ಡಾ.ರಾಜ್‍ಕುಮಾರ್ ಅವರು ಬರೀ ನಟರಾಗಿ ಗುರುತಿಸಿಕೊಂಡವರಲ್ಲ. ಅವರು ನಾಡಿನ ಸಾಂಸ್ಕೃತಿಕ ರಾಯಭಾರಿ ಆಗಿದ್ದರು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ರವಿವಾರ ನಗರದ ಕಂಠೀರವ ಸ್ಟುಡಿಯೋದಲ್ಲಿ ರಾಘವೇಂದ್ರ ರಾಜ್‍ಕುಟುಂಬರಿಂದ, ಡಾ.ರಾಜ್‍ಕುಮಾರ್ ಸ್ಮಾರಕಕ್ಕೆ ಪೂಜೆ ಮಾಡುವ ಮೂಲಕ 94ನೆ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಇದೇ ವೇಳೆ ಮಾತನಾಡಿದ ಬರಗೂರು, ರಾಜ್‍ಕುಮಾರ್ ದೊಡ್ಡ ನಟರಾಗಿದ್ದರೂ, ಅವರ ಸರಳತೆ, ಪ್ರತಿಯೊಬ್ಬರಿಗೆ ಕೊಡುತ್ತಿದ್ದ ಗೌರವ ಎಲ್ಲರಿಗೂ ಮಾದರಿಯಾಗಿತ್ತು. ಆ ಕಾಲದಲ್ಲಿ ರಾಜ್‍ಕುಮಾರ್ ಅವರು ಪೊಲೀಸ್ ಇಲಾಖೆಗೆ 60 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದರು. ಜೊತೆಗೆ ಸಂಗೀತ ರಸಸಂಜೆ ಕಾರ್ಯಕ್ರಮಗಳನ್ನು ಮಾಡಿ ಡಾ.ರಾಜ್ ಅವರು ಕಷ್ಟದಲ್ಲಿರುವ ಕಲಾವಿದರು ಹಾಗೂ ನಾಟಕ ಕಂಪೆನಿಗಳಿಗೆ ಸಹಾಯ ಮಾಡುತ್ತಿದ್ದರು ಎಂದು ಹೇಳಿದರು.
ಬಳಿಕ ಮಾತನಾಡಿದ ನಟ ರಾಘವೇಂದ್ರ ರಾಜ್ ಕುಮಾರ್, ಮೂರು ವರ್ಷಗಳಿಂದ ಸರಿಯಾಗಿ ಜನ್ಮದಿನಾಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಜಾಗದಲ್ಲಿ ನಾವು ಅವರ ಮೌಲ್ಯಗಳನ್ನ ನೆನೆಪಿಸಿಕೊಳ್ಳಬೇಕು. ನಮ್ಮ ಮನೆಯ ಮೂರು ಜನ ನೇತ್ರ ದಾನ ಮಾಡಿದ್ದಾರೆ ಎಂದರು.
ಇಂದು ಅಭಿಮಾನಿಗಳು ಈ ಜನ್ಮಸ್ಥಳದಿಂದ ಪುಣ್ಯಸ್ಥಳದವರೆಗೆ ಯಾತ್ರೆ ಮಾಡಿಕೊಂಡು ಬರುತ್ತಿದ್ದಾರೆ. ಇದು ಜನಗಳ ಹಬ್ಬ, ನಮ್ಮ ಮನೆ ಹಬ್ಬ ಅಲ್ಲ. ಇದರಲ್ಲಿ ನಾನು ಒಬ್ಬ ಅಭಿಮಾನಿಯಾಗಿ ಸೇರಿಕೊಂಡಿದ್ದೀನಿ. ನಾವು ಮಾಡುವ ಒಳ್ಳೆ ಕೆಲಸ ಮಾತ್ರ ನಿರಂತರವಾಗಿ ಇರುತ್ತದೆ ಎಂದು ನನ್ನ ತಂದೆಯವರು ಹೇಳುತ್ತಾ ಇದ್ದರು. ಅವರ ಸೇವೆ, ಅವರ ಪ್ರೀತಿ ಎಲ್ಲರನ್ನು ಇಲ್ಲಿಯವರೆಗೆ ಕರೆ ತರುತ್ತಿದೆ ಎಂದು ಹೇಳಿದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಸಚಿವರಾದ ಮುನಿರತ್ನ, ಗೋಪಾಲಯ್ಯ, ರಾಜ್ ಕುಮಾರ್ ಸ್ಮಾರಕಕ್ಕೆ ನಮನ ಸಲ್ಲಿಸಿದರು.







