ಉತ್ತರಪ್ರದೇಶದ ತನಿಖಾ ಸಂಸ್ಥೆಗೆ ಸಿಬಿಐ ಸಮಾನ ಅಧಿಕಾರ ಕಾನೂನು ರೂಪಿಸಲು ಆದಿತ್ಯನಾಥ್ ಚಿಂತನೆ

ಲಕ್ನೋ, ಎ 24: ರಾಜ್ಯದ ಕ್ರಿಮಿನಲ್ ತನಿಖಾ ಸಂಸ್ಥೆಗೆ ಸಿಬಿಐಗೆ ಸಮಾನವಾದ ಅಧಿಕಾರವನ್ನು ನೀಡಲು ಅವಕಾಶ ಕಲ್ಪಿಸುವ ಕಾಯ್ದೆ ಜಾರಿಗೊಳಿಸಲು ಉತ್ತರಪ್ರದೇಶ ಸರಕಾರ ಚಿಂತಿಸುತ್ತಿದೆ.
ಸಿಬಿಐಯನ್ನು ನಿಯಂತ್ರಿಸುವ ಕಾನೂನು ದಿಲ್ಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆಯ ರೀತಿಯಲ್ಲಿ ವಿಶೇಷ ಕಾನೂನು ಉತ್ತರಪ್ರದೇಶ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆಯ ಕರಡು ರೂಪಿಸುವಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ರಾಜ್ಯದ ಗೃಹ ಸಚಿವಾಲಯಕ್ಕೆ ಗುರುವಾರ ಆದೇಶಿಸಿದ್ದಾರೆ.
ಪ್ರಸ್ತುತ ಡಿಜಿಪಿ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿರುವ ರಾಜ್ಯದ ವಿಶೇಷ ತನಿಖಾ ತಂಡ (ಎಸ್ಐಟಿ)ವನ್ನು ಸಬಲಗೊಳಿಸುವ ಉದ್ದೇಶವನ್ನು ಈ ನೂತನ ಕಾನೂನು ಹೊಂದಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ ತಿಳಿಸಿದ್ದಾರೆ.
ತಮ್ಮ ಉನ್ನತ ಸ್ಥಾನವನ್ನು ದುರ್ಬಳಕೆ ಮಾಡಿಕೊಳ್ಳುವ ಅಥವಾ ಗಂಭೀರ ಸ್ವರೂಪದ ಅಕ್ರಮಗಳಲ್ಲಿ ಹಾಗೂ ಆರ್ಥಿಕ ಅಪರಾಧಗಳಲ್ಲಿ ಕಮಿಷನ್ ಪಡೆಯುವುದರಲ್ಲಿ ತೊಡಗಿಕೊಂಡಿರುವ ಹಾಗೂ ಅದರೊಂದಿಗೆ ಸಂಪರ್ಕ ಹೊಂದಿರುವ ಪ್ರಭಾವಿ ವ್ಯಕ್ತಿಗಳು ಹಾಗೂ ಸರಕಾರಿ ನೌಕರರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ತನಿಖೆ ನಡೆಸುವ ಬಹುಶಿಸ್ತೀಯ ಸಂಸ್ಥೆ ಉತ್ತರಪ್ರದೇಶದ ಎಸ್ಐಟಿ ಎಂದು ಏಜೆನ್ಸಿಯ ವೆಬ್ಸೈಟ್ ಹೇಳಿದೆ.
ಕೇಂದ್ರ ಸರಕಾರದ ಉದ್ಯೋಗಿಗಳ ವಿರುದ್ಧ ಭ್ರಷ್ಟಾಚಾರದ ಆರೋಪದ ತನಿಖೆ ನಡೆಸುವ ದೇಶದ ಅತ್ಯುಚ್ಚ ತನಿಖಾ ಸಂಸ್ಥೆ ಸಿಬಿಐ. ಅಲ್ಲದೆ, ಇದು ಏಕೈಕ ಒಕ್ಕೂಟ ಸಂಸ್ಥೆ. ಮೊದಲ ಅವತಾರದಲ್ಲಿ ವಿಶೇಷ ಪೊಲೀಸ್ ಸ್ಥಾಪನೆ ಎಂದು ಕರೆಯಲಾದ ಈ ವಸಾಹತುಶಾಹಿ ಕಾಲದ ಈ ಸಂಸ್ಥೆಯನ್ನು ಯುದ್ಧ ಸಂಬಂಧಿ ಖರೀದಿಯಲ್ಲಿನ ಭ್ರಷ್ಟಾಚಾರದ ಆರೋಪದ ಬಗ್ಗೆ ತನಿಖೆ ನಡೆಸಲು 1941ರಲ್ಲಿ ಮೊದಲ ಬಾರಿ ಆರಂಭಿಸಲಾಗಿತ್ತು. 1946ರಲ್ಲಿ ಇದು ದಿಲ್ಲಿ ವಿಶೇಷ ಪೊಲೀಸ್ ಸ್ಥಾಪನೆ ಅಡಿಯಲ್ಲಿ ಬಂತು.