ಐಪಿಎಲ್: ರಾಹುಲ್ ಶತಕ, ಮುಂಬೈ ವಿರುದ್ಧ ಲಕ್ನೊ ಜಯಭೇರಿ

Photo:twitter
ಮುಂಬೈ, ಎ.24: ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಕೆ.ಎಲ್.ರಾಹುಲ್ ಸಿಡಿಸಿದ ಎರಡನೇ ಆಕರ್ಷಕ ಶತಕ ಹಾಗೂ ಕೃನಾಲ್ ಪಾಂಡ್ಯ (3-19)ನೇತೃತ್ವದಲ್ಲಿ ಬೌಲರ್ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ರವಿವಾರ ನಡೆದ ಐಪಿಎಲ್ನ 37ನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 36 ರನ್ಗಳ ಅಂತರದಿಂದ ಮಣಿಸಿತು.
ಗೆಲ್ಲಲು 169 ರನ್ ಗುರಿ ಪಡೆದ ಮುಂಬೈ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ ಸತತ 8ನೇ ಸೋಲು ಕಂಡಿತು.
ತಾನಾಡಿದ 8ನೇ ಪಂದ್ಯದಲ್ಲಿ 5ನೇ ಗೆಲುವು ದಾಖಲಿಸಿ 10 ಅಂಕ ಗಳಿಸಿದ ಲಕ್ನೊ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಈ ವರ್ಷದ ಟೂರ್ನಿಯಲ್ಲಿ ಗೆಲುವಿನ ಮುಖವನ್ನೇ ಕಾಣದ ಮುಂಬೈನ ಪ್ಲೇ ಆಫ್ ಕನಸು ಬಹುತೇಕ ಭಗ್ನವಾಗಿದೆ.
ಮುಂಬೈ ಪರ ನಾಯಕ ರೋಹಿತ್ ಶರ್ಮಾ(39 ರನ್, 31 ಎಸೆತ), ತಿಲಕ್ ವರ್ಮಾ(38 ರನ್, 27 ಎಸೆತ) ಹಾಗೂ ಕಿರೋನ್ ಪೊಲಾರ್ಡ್(19 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಲಕ್ನೊ ಪರ ಕೃನಾಲ್ ಪಾಂಡ್ಯ(3-19)ಯಶಸ್ವಿ ಬೌಲರ್ ಎನಿಸಿಕೊಂಡರು. ಮೊಹ್ಸಿನ್ ಖಾನ್(1-27), ಜೇಸನ್ ಹೋಲ್ಡರ್(1-36), ರವಿ ಬಿಷ್ಣೋಯಿ(1-28) ಹಾಗೂ ಆಯುಷ್ ಬದೋನಿ(1-6)ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಲಕ್ನೊ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 168 ರನ್ ಗಳಿಸಿತು.
ಲಕ್ನೊ ತಂಡ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್(10 ರನ್)ವಿಕೆಟನ್ನು ಬೇಗನೆ ಕಳೆದುಕೊಂಡಿತು. ಮನೀಶ್ ಪಾಂಡೆ(22, 22 ಎಸೆತ)ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸಲು ವಿಫಲರಾದರು. ಮಾರ್ಕಸ್ ಸ್ಟೋನಿಸ್ ಸೊನ್ನೆ ಸುತ್ತಿದರು. ಕೃನಾಲ್ ಪಾಂಡ್ಯ 1 ರನ್ ಗಳಿಸಲಷ್ಟೇ ಶಕ್ತರಾದರು. ದೀಪಕ್ ಹೂಡ(10) ಹಾಗೂ ಆಯುಷ್ ಬದೋನಿ(14) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಲಕ್ನೊ ನಾಯಕ ಕೆ.ಎಲ್.ರಾಹುಲ್ ಔಟಾಗದೆ 103 ರನ್(62 ಎಸೆತ, 12 ಬೌಂಡರಿ, 4 ಸಿಕ್ಸರ್)ಗಳಿಸಿ ತಂಡದ ಪರ ಏಕಾಂಗಿ ಹೋರಾಟ ನೀಡಿದರು. ಅವರಿಗೆ ಮತ್ತೊಂದು ತುದಿಯಿಂದ ಮನೀಶ್ ಪಾಂಡೆ ಹಾಗೂ ಬದೋನಿ ಹೊರತುಪಡಿಸಿ ಬೇರೆ ಯಾರಿಂದಲೂ ಸರಿಯಾದ ಸಾಥ್ ಸಿಗಲಿಲ್ಲ. ಪಾಂಡೆ ಹಾಗೂ ರಾಹುಲ್ 2ನೇ ವಿಕೆಟ್ಗೆ 58 ರನ್ ಜೊತೆಯಾಟ ನಡೆಸಿದರು. ಆ ನಂತರ 6ನೇ ವಿಕೆಟ್ಗೆ ಬದೋನಿ ಜೊತೆ ಸೇರಿಕೊಂಡು 47 ರನ್ ಸೇರಿಸಿ ತಂಡದ ಮೊತ್ತವನ್ನು 168ಕ್ಕೆ ತಲುಪಿಸಿದರು.
ರಾಹುಲ್ ಮುಂಬೈ ವಿರುದ್ಧ 2ನೇ ಬಾರಿ ಶತಕ ಸಿಡಿಸಿದರು. ಐಪಿಎಲ್ನಲ್ಲಿ 4ನೇ ಬಾರಿ ಶತಕ ಸಿಡಿಸಿ ಜೋಸ್ ಬಟ್ಲರ್, ಶೇನ್ ವಾಟ್ಸನ್ ಹಾಗೂ ಡೇವಿಡ್ ವಾರ್ನರ್ ದಾಖಲೆಯನ್ನು ಸರಿಗಟ್ಟಿದರು. ಟ್ವೆಂಟಿ-20ಯಲ್ಲಿ ಆರನೇ ಶತಕ ಸಿಡಿಸಿ ಅತ್ಯಂತ ಹೆಚ್ಚು ಶತಕ ಗಳಿಸಿದ ಭಾರತದ ಬ್ಯಾಟರ್ ರೋಹಿತ್ ದಾಖಲೆಯನ್ನು ಸರಿದೂಗಿಸಿದರು.
ಮುಂಬೈ ಪರ ಕಿರೊನ್ ಪೊಲಾರ್ಡ್(2-8) ಹಾಗೂ ರಿಲೇ ಮೆರೆಡಿತ್(2-40)ತಲಾ ಎರಡು ವಿಕೆಟ್ ಪಡೆದರು.







