ಪಾಕಿಸ್ತಾನದ ಧ್ವಜ ಹಾರಿಸಿದವರ ಗತಿ ಏನಾಯಿತು?
ಮಾನ್ಯರೇ,
ಕರ್ನಾಟಕದ ಸಿಂಧಗಿಯಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಪಾಕಿಸ್ತಾನದ ಧ್ವಜ ಹಾರಿಸಿರುವ ಪ್ರಕರಣ ನಿಮಗೆ ನೆನಪಿರಬಹುದು. ಈ ಪ್ರಕರಣವನ್ನು ಮುಂದಿಟ್ಟು ರಾಜ್ಯದಲ್ಲಿ ದಂಗೆ ನಡೆಸುವ, ಹಿಂಸಾಚಾರ ನಡೆಸುವ ಪ್ರಯತ್ನವೊಂದು ನಡೆಯಿತು. ಶ್ರೀರಾಮಸೇನೆಯ ಕಾರ್ಯಕರ್ತರು ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದವರನ್ನು ಬಂಧಿಸಬೇಕು ಎಂದು ಪ್ರತಿಭಟನೆ ನಡೆಸಿದರು. ಆದರೆ ತನಿಖೆ ನಡೆದಾಗ ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿರುವುದೇ ಶ್ರೀರಾಮಸೇನೆಯ ಕಾರ್ಯಕರ್ತರು ಎನ್ನುವುದು ಬೆಳಕಿಗೆ ಬಂತು. ಬಂಧನವೂ ಆಯಿತು. ಆದರೆ ಆ ಬಳಿಕ ಅವರ ಸ್ಥಿತಿಗತಿ ಏನಾಯಿತು ಎನ್ನುವ ವಿವರಗಳು ಸಿಗುವುದಿಲ್ಲ. ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ಯ ನ್ಯಾಯಾಲಯದ ಆವರಣದಲ್ಲಿ ಸ್ಫೋಟಕಗಳನ್ನು ಎಸೆದವರ ಗತಿಯ ಬಗ್ಗೆಯೂ ಮಾಹಿತಿಯಿಲ್ಲ. ಇವರೂ ಕೂಡ ಶ್ರೀರಾಮಸೇನೆಯ ಕಾರ್ಯಕರ್ತರೇ ಆಗಿದ್ದಾರೆ.
ಇವರಿಗೆ ದೇಶ ಮುಖ್ಯವಲ್ಲ. ದೇಶದ ಬೆನ್ನಿಗೆ ಇರಿದಾದರೂ ಸರಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಬೇಕು. ಇದರಲ್ಲಿ ತಮ್ಮ ಲಾಭಗಳನ್ನು ಹುಡುಕುವುದೇ ಇವರ ಉದ್ದೇಶ. ಈಗಾಗಲೇ ರಾಮಸೇನೆಯ ಮುಖ್ಯಸ್ಥನಿಗೆ ಗೋವಾ ಸರಕಾರ ನಿಷೇಧ ಹೇರಿದೆ. ಇದೀಗ ಈತ ರಾಜ್ಯದಲ್ಲಿ ದುಷ್ಕೃತ್ಯಗಳನ್ನು ಎಸಗಲು ಸಂಚು ನಡೆಸುತ್ತಿದ್ದಾನೆ. ಶೀಘ್ರದಲ್ಲೇ ಈತನನ್ನು ರಾಜ್ಯದಿಂದ ಗಡೀಪಾರು ಮಾಡದೇ ಇದ್ದರೆ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟ. ಈತನಿಂದ ಹಿಂದೂ ಧರ್ಮಕ್ಕೆ, ಭಾರತ ದೇಶಕ್ಕೆ ಹೆಚ್ಚು ಅಪಾಯವಿದೆ. ಪಾಕಿಸ್ತಾನದ ಏಜೆಂಟನಂತೆ ಕಾರ್ಯಾಚರಿಸುತ್ತಿರುವ ಈತನನ್ನು ಬಂಧಿಸಿ ಗಂಭೀರ ತನಿಖೆ ನಡೆಸಬೇಕು, ಇಲ್ಲವೇ ಪಾಕಿಸ್ತಾನಕ್ಕೆ ಗಡೀಪಾರು ಮಾಡಬೇಕು.







