ಆಡಳಿತ ಪಕ್ಷದ ದುರಾಡಳಿತದಿಂದ ಜನರು ದಿಕ್ಕೆಟ್ಟಿದ್ದಾರೆ: ರವಿ ಕೃಷ್ಣಾ ರೆಡ್ಡಿ

ಬೆಂಗಳೂರು, ಎ. 24: ‘ರಾಜ್ಯದ ಪರಿಸ್ಥಿತಿ ಅಧೋಗತಿಗೆ ತಲುಪಿದ್ದು, ಆಡಳಿತ ಪಕ್ಷದ ಬೆಲೆ ಏರಿಕೆ, ಅಕ್ರಮ, ಭ್ರಷ್ಟಾಚಾರ, ದುರಾಡಳಿತದಿಂದ ಜನರು ದಿಕ್ಕೆಟ್ಟಿದ್ದಾರೆ. ಈ ಸಂದರ್ಭದಲ್ಲಿ ಜನರಿಗೆ ಚೈತನ್ಯ ತುಂಬುವ ಅಗತ್ಯವಿದೆ ಮತ್ತು ಅದಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‍ಎಸ್)ಪಕ್ಷ ಮುಂದಿನ ಒಂದು ವರ್ಷಗಳ ಕಾಲ ಚೈತನ್ಯ ಯಾತ್ರೆ ಕಾರ್ಯಕ್ರಮ ಮುಂದುವರೆಯಲಿದೆ' ಎಂದು ಕೆಆರ್‍ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ತಿಳಿಸಿದ್ದಾರೆ.
ರವಿವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ‘ಕರ್ನಾಟಕ ಜನಚೈತನ್ಯ ಯಾತ್ರೆಗೆ' ಚಾಲನೆ ನೀಡಿ ಮಾತನಾಡಿದ ಅವರು, ‘ಅಧೋಗತಿಗೆ ತಲುಪಿರುವ ಪ್ರಜಾಪ್ರಭುತ್ವವನ್ನು ತಳ ಮಟ್ಟದಿಂದ ಕಟ್ಟುವಲ್ಲಿ ಹಾಗೂ ಸಮಾನತೆಯ ನಾಡನ್ನು ಕಟ್ಟುವಲ್ಲಿ, ನಾಡಿನ ಜನ, ನೆಲ, ಜಲ, ಅರಣ್ಯ, ನುಡಿಯನ್ನು ಸಂರಕ್ಷಿಸಿ ಬೆಳಸುವ ಕೆಲಸ ಮಾಡಬೇಕಾಗಿದೆ. ಈ ಮೂಲಕ ಪಕ್ಷವು ಸಮೃದ್ಧ, ಕಲ್ಯಾಣ, ಸರ್ವೋದಯ ಕರ್ನಾಟಕವನ್ನು ಕಟ್ಟುತ್ತದೆ. ಅದಕ್ಕೆ ಕೆಆರ್‍ಎಸ್ ಪಕ್ಷದ ಸೈನಿಕರು ಸನ್ನಾದ್ದರಾಗಿದ್ದಾರೆ' ಎಂದು ತಿಳಿಸಿದರು.
ಸಂಯುಕ್ತ ಜನತಾದಳದ ಮಹಿಮಾ ಪಟೇಲ್ ಅವರು ಮಾತನಾಡಿ, ಜನಚೈತನ್ಯ ಯಾತ್ರೆ ಯಶಸ್ವಿಯಾಗಬೇಕು. ಸುವರ್ಣ ಕರ್ನಾಟಕ ಕಟ್ಟುವಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು. ಸ್ವಾತಂತ್ರ್ಯ ಉದ್ಯಾನದ ಆವರಣದಲ್ಲಿನ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಈ ಯಾತ್ರೆಗೆ ಚಾಲನೆ ನೀಡಿದ ಬಳಿಕ, ಆನಂದರಾವ್ ವೃತ್ತದಲ್ಲಿನ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಮಾಲಾರ್ಪಣೆ ಮಾಡಿ, ನಂತರ ವಿಧಾನಸೌಧದ ಮುಂಭಾಗದಲ್ಲಿರುವ ಜವಾಹರ್ ಲಾಲ್ ನೆಹರು, ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಜಗಜ್ಯೋತಿ ಬಸವಣ್ಣನವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಯಾತ್ರೆಯನ್ನು ಆರಂಭಿಸಲಾಯಿತು.
ಯಾತ್ರೆಯು ನಗರದ ಯಲಹಂಕ, ದೊಡ್ಡಬಳ್ಳಾಪುರ, ಗೌರಿಬಿದನೂರು ಮುಖಾಂತರ ದಕ್ಷಿಣದ ಜಲಿಯನ್ ವಾಲಾ ಬಾಗ್ ಎಂದೇ ಪ್ರಸಿದ್ದವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ವಿದುರಾಶ್ವತ್ಥ ತಲುಪಲಿದೆ. ಇದೇ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಜನರು ಕೆಆರ್‍ಎಸ್ ಪಕ್ಷ ಸೇರಿದರು ಮತ್ತು ಜನಚೈತನ್ಯ ಯಾತ್ರೆಗೆ 45 ಸಾವಿರ ರೂ.ಗಳಿಗೂ ಹೆಚ್ಚು ದೇಣಿಗೆಯನ್ನು ನೀಡಿದರು. ಚಾಲನಾ ಸಮಾವೇಶದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಪದಾಧಿಕಾರಿಗಳು ಪಾಲ್ಗೊಂಡಿದ್ದರು.







