ಚೀನಾದಲ್ಲಿ ಕೋವಿಡ್ ಸೋಂಕು ಮತ್ತೆ ಉಲ್ಬಣ: ಶಾಂಘೈಯಲ್ಲಿ ಒಂದೇ ದಿನ 39 ಮಂದಿ ಮೃತ್ಯು

photo:twitter
ಬೀಜಿಂಗ್, ಎ.24: ಕೋವಿಡ್-19 ಸೋಂಕು ಸಮುದಾಯ ಹಂತಕ್ಕೆ ಹರಡುವ ಸಾಧ್ಯತೆ ಇರುವುದರಿಂದ ಚೀನಾದ ರಾಜಧಾನಿ ಬೀಜಿಂಗ್ನಲ್ಲಿ ಕಟ್ಟೆಚ್ಚರದ ಸ್ಥಿತಿ ಘೋಷಿಸಲಾಗಿದೆ. ದೇಶದ ವಾಣಿಜ್ಯ ರಾಜಧಾನಿ ಶಾಂಘೈನಲ್ಲಿ ಜಾರಿಯಲ್ಲಿರುವ ಕಠಿಣ ನಿರ್ಬಂಧದ ಮಧ್ಯೆಯೇ ಸೋಂಕಿನ ಪ್ರಕರಣಗಳು ಏಕಾಏಕಿ ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ರವಿವಾರ ಹೇಳಿದೆ.
ಶಾಂಘೈಯಲ್ಲಿ ಶನಿವಾರ ಸೋಂಕಿನಿಂದ ಒಂದೇ ದಿನ 39 ಮಂದಿ ಮೃತಪಟ್ಟಿದ್ದು, ಕಳೆದ ತಿಂಗಳು ಕಾಣಿಸಿಕೊಂಡ 4ನೇ ಅಲೆಯ ಬಳಿಕ ಒಂದೇ ದಿನ ಸಂಭವಿಸಿದ ಅತ್ಯಧಿಕ ಸಾವಿನ ಪ್ರಕರಣ ಇದಾಗಿದೆ. ಮೈನ್ಲ್ಯಾಂಡ್ ಚೀನಾದಲ್ಲಿ ಶನಿವಾರ 21,796 ಹೊಸ ಸೋಂಕು ಪ್ರಕರಣ ದಾಖಲಾಗಿದ್ದು ಇದರಲ್ಲಿ 1,566 ಪಾಸಿಟಿವ್ ಮತ್ತು ಉಳಿದವು ಸೋಂಕಿನ ಲಕ್ಷಣರಹಿತ ಪ್ರಕರಣಗಳು. ಹೊಸ ಸೋಂಕು ಪ್ರಕರಣದಲ್ಲಿ ಹೆಚ್ಚಿನ ಪ್ರಕರಣ ಶಾಂಘೈಯಲ್ಲಿ ವರದಿಯಾಗಿದೆ ಎಂದು ಆರೋಗ್ಯ ಆಯೋಗ ಹೇಳಿದೆ. ರಾಜಧಾನಿ ಬೀಜಿಂಗ್ನಲ್ಲಿ ಶನಿವಾರ 22 ಹೊಸ ಸಮುದಾಯ ಸೋಂಕು ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಶುಕ್ರವಾರ ಹೈಸ್ಕೂಲ್ನ 10 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದ್ದ ಬಳಿಕ ಬೀಜಿಂಗ್ ನಗರದಲ್ಲಿ ಶಾಲೆಗಳನ್ನು ಒಂದು ವಾರ ಮುಚ್ಚಲು ಆದೇಶಿಸಲಾಗಿದೆ.
ಬೀಜಿಂಗ್ನಲ್ಲಿ ಒಂದು ವಾರದ ಹಿಂದೆಯೇ ಪತ್ತೆಯಾಗದ ಸ್ಥಳೀಯ ಪ್ರಸರಣ ಆರಂಭವಾಗಿತ್ತು ಮತ್ತು ಶಾಲೆಗಳು, ಪ್ರವಾಸ ಗುಂಪು ಮತ್ತು ಕುಟುಂಬದವರು ಸೋಂಕಿನ ವ್ಯಾಪ್ತಿಯಲ್ಲಿದ್ದರು . ಸೋಂಕಿತ ವ್ಯಕ್ತಿಗಳು ವಿಭಿನ್ನ ಹಿನ್ನೆಲೆಯವರಾಗಿದ್ದಾರೆ ಎಂದು ಬೀಜಿಂಗ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಆ್ಯಂಡ್ ಕಂಟ್ರೋಲ್ನ ಉಪ ನಿರ್ದೇಶಕ ಪಾಂಗ್ ಕ್ಸಿನ್ಘೂ ಹೇಳಿದ್ದಾರೆ. ಸಮುದಾಯ ಸೋಂಕು ವರದಿಯಾದ ಸ್ಥಳಗಳಲ್ಲಿ ಪ್ರವಾಸಕ್ಕೆ ತೆರಳಿದ್ದ ಹಿರಿಯ ನಾಗರಿಕರು, ನಿರ್ಮಾಣ ಕಾರ್ಮಿಕರು ಮತ್ತು ಶಾಲೆಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಸಾಮೂಹಿಕ ಸೋಂಕು ಪರೀಕ್ಷೆಗೆ ಒಳಪಡಿಸಲಾಗುವುದು ಎಂದವರು ಹೇಳಿದ್ದಾರೆ.
ಶಾಂಘೈ ನಗರದಲ್ಲಿ ಅತ್ಯಧಿಕ ಸೋಂಕು ಪ್ರಕರಣ ದಾಖಲಾಗಿದ್ದರೆ, ಜಿಲಿನ್ ಪ್ರಾಂತದಲ್ಲಿ 60, ಹಿಲಾಂಗ್ಜಿಯಾಂಗ್ನಲ್ಲಿ 26 ಮತ್ತು ಬೀಜಿಂಗ್ನಲ್ಲಿ 22 ಪ್ರಕರಣ ದಾಖಲಾಗಿದೆ. ಇತರ 13 ಪ್ರಾಂತಗಳಲ್ಲೂ ಸೋಂಕು ಹೆಚ್ಚಳಗೊಂಡಿದೆ. ಶಾಂಘೈಯಲ್ಲಿ ಶನಿವಾರ 23,370 ಹೊಸ ಪ್ರಕರಣ ದಾಖಲಾಗುವುದರೊಂದಿಗೆ ನಗರದಲ್ಲಿ ಮಾರ್ಚ್ 1ರ ಬಳಿಕ ದಾಖಲಾದ ಸೋಂಕಿನ ಪ್ರಕರಣ 4,66,000ಕ್ಕೆ ಹೆಚ್ಚಿದೆ ಎಂದು ವರದಿಯಾಗಿದೆ.







