ಶಿರಹಟ್ಟಿ ಮಠಕ್ಕೆ 2 ಕೋಟಿ ರೂ. ಅನುದಾನ ನೇರವಾಗಿ ಬರುವುದಿಲ್ಲ: ದಿಂಗಾಲೇಶ್ವರ ಶ್ರೀಗಳಿಂದ ಮತ್ತೊಂದು ಆರೋಪ

ದಿಂಗಾಲೇಶ್ವರ ಸ್ವಾಮೀಜಿ
ಗದಗ: ಮಠಗಳಿಗೆ ಸರಕಾರ ಬಿಡುಗಡೆ ಮಾಡುವ ಅನುದಾನ ಪಡೆಯಲು ಶೇ.30ರಷ್ಟು ಕಮಿಷನ್ ನೀಡಬೇಕಿದೆ ಎಂದು ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡಿದ್ದ ಶಿರಹಟ್ಟಿ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಇದೀಗ ಮತ್ತೊಂದು ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, 'ಬಿ.ಎಸ್. ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಬಜೆಟ್ ನಲ್ಲಿ 2 ಕೋಟಿ ರೂ. ಶಿರಹಟ್ಟಿ ಮಠದ ಅಭಿವೃದ್ಧಿಗೆ ತೆಗದಿಟ್ಟಿದ್ದರು. ಆದರೆ 2 ಕೋಟಿ ಅನುದಾನ ಶಿರಹಟ್ಟಿ ಮಠಕ್ಕೆ ಜಿಲ್ಲಾಧಿಕಾರಿಗಳಿಂದ ನೇರವಾಗಿ ಬರುವುದಿಲ್ಲ. ಟೆಂಡರ್ ಆಗುತ್ತೆ, ಅಲ್ಲೊಬ್ಬರು ಗುತ್ತಿಗೆದಾರರು ಅರ್ಜಿ ಹಾಕುತ್ತಾರೆ, ಅವರಿಗೆ ಬರುತ್ತದೆ. ಹಣ ಖರ್ಚು ಮಾಡಿಕೊಂಡು ಬೇರೆ ಕಾಮಗಾರಿ ಪೂರೈಸುತ್ತಾರೆ' ಎಂದು ಆರೋಪಿಸಿದ್ದಾರೆ.
'ಇದರಿಂದಾಗಿ 1.25 ಕೋಟಿ ರೂ. ಹಣ 10 ವರ್ಷ ಕಳೆದರೂ ಇನ್ನೂ ಮಠಕ್ಕೆ ಬಂದಿಲ್ಲ. ಪ್ರತಿಷ್ಠಿತ ಸ್ವಾಮೀಜಿ ನೇರವಾಗಿ ಹಣ ಮಠಕ್ಕೆ ಬರುತ್ತದೆ ಎಂದು ಹೇಳಿದ್ಧಾರೆ. ಆದರೆ ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠವಾಗಿರುವ ಶಿರಹಟ್ಟಿಮಠಕ್ಕೆ ಯಾಕೆ ಹಣ ನೇರವಾಗಿ ಬಂದಿಲ್ಲ' ಎಂದು ಪ್ರಶ್ನಿಸಿದ್ದಾರೆ.





