ಇಕ್ವೆಡಾರ್: ಡೀಸೆಲ್ ಸಾಗಿಸುತ್ತಿದ್ದ ದೋಣಿ ಮುಳುಗಡೆ

PHOTO:TWITTER
ಕ್ವಿಟೊ, ಎ.24: ಇಕ್ವೆಡಾರ್ನ ಪರಿಸರ ಸೂಕ್ಷ್ಮ ವಲಯ ಗಲಪಗೋಸ್ ದ್ವೀಪದಲ್ಲಿ ಡೀಸೆಲ್ ಸಾಗಿಸುತ್ತಿದ್ದ ದೋಣಿ ಮುಳುಗಿದ್ದು ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೋಣಿಯಲ್ಲಿ ಸುಮಾರು 47 ಬ್ಯಾರೆಲ್ನಷ್ಟು ಡೀಸೆಲ್ ಸಾಗಿಸಲಾಗುತ್ತಿತ್ತು. ಸಂರಕ್ಷಿತ ನೈಸರ್ಗಿಕ ಪರಂಪರೆಯ ತಾಣವಾಗಿರುವ ಗಲಪಗೋಸ್ ದ್ವೀಪದಲ್ಲಿ ರಾಷ್ಟ್ರೀಯ ಉದ್ಯಾನವನವೂ ಇದೆ. ಆಲ್ಬಟ್ರೋರ್ ಎಂಬ ಹೆಸರಿನ ದೋಣಿಯನ್ನು ಸ್ಕೂಬಾ ಡೈವಿಂಗ್ ವಿಹಾರಕ್ಕೆ ಬಳಸಲಾಗುತ್ತಿದೆ. ಡೀಸೆಲ್ ತುಂಬಿದ್ದ ದೋಣಿ ಮುಳುಗಿರುವ ಬಗ್ಗೆ ಸರಕಾರಿ ಸ್ವಾಮ್ಯದ ತೈಲ ಸಂಸ್ಥೆ ಪ್ರಥಮವಾಗಿ ಮಾಹಿತಿ ರವಾನಿಸಿದೆ. ದೋಣಿಯಲ್ಲಿದ್ದ 4 ಸಿಬಂದಿಗಳು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ತೈಲ ಸೋರಿಕೆಯನ್ನು ನಿಬರ್ಂಧಿಸಲು ತಾತ್ಕಾಲಿಕ ತಡೆಗೋಡೆಯನ್ನು ಅಪಘಾತ ನಡೆದ ಸ್ಥಳದ ಸುತ್ತ ರಚಿಸಲಾಗಿದೆ. ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವಾಸಿಗರ ಭೇಟಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೆಸಿಫಿಕ್ ಸಾಗರದಲ್ಲಿ, ಇಕ್ವೆಡಾರ್ನ ಕರಾವಳಿ ತೀರದ ಬಳಿ ಇರುವ ಗಲಪಗೋಸ್ ದ್ವೀಪ ದೈತ್ಯ ಆಮೆಗಳಿಗೆ ಹೆಸರಾಗಿದೆ. ಸಂರಕ್ಷಿತ ವನ್ಯಜೀವಿ ಪ್ರದೇಶವಾಗಿರುವ ಈ ದ್ವೀಪ ವಿಶಿಷ್ಟ ಜಾತಿಯ ಪ್ರಾಣಿ ಮತ್ತು ಸಸ್ಯಗಳಿಗೆ ನೆಲೆಯಾಗಿದೆ.





