'ಉಕ್ರೇನ್ʼನಿಂದ ಬಂದ ವಿದ್ಯಾರ್ಥಿಗಳ ಬಗ್ಗೆ ಉಪೇಕ್ಷೆ ಮಾಡಿದರೆ ಸಹಿಸುವ ಪ್ರಶ್ನೆ ಇಲ್ಲ: ಕುಮಾರಸ್ವಾಮಿ
''ನಮ್ಮ ಇಡೀ ಶಿಕ್ಷಣ ವ್ಯವಸ್ಥೆ ಹಣವಂತರು, ರಾಜಕಾರಣಿಗಳ ಕಪಿಮುಷ್ಠಿಯಲ್ಲಿದೆ''

ಬೆಂಗಳೂರು: 'ಯುದ್ಧಪೀಡಿತ ಉಕ್ರೇನ್ʼನಿಂದ ವಾಪಸಾದ ವಿದ್ಯಾರ್ಥಿಗಳ ನೆರವಿಗೆ ನಾವಿದ್ದೇವೆ, ಹೆದರಬೇಕಿಲ್ಲ ಎಂದು ಹೇಳುತ್ತಿದ್ದ ಎರಡೂ ಸರಕಾರಗಳು; ಎರಡು ತಿಂಗಳಾದರೂ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿಲ್ಲ, ಏಕೆ?' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಸಂಬಂಧ ಸೋಮವಾರ ಟ್ವೀಟ್ ಮಾಡಿರುವ ಅವರು, ' ಒಂದೆಡೆ ನೀಟ್ ವ್ಯವಸ್ಥೆಯನ್ನು ಇಡೀ ದೇಶದ ಮೇಲೆ ಹೇರಿ, ವೈದ್ಯಶಿಕ್ಷಣವನ್ನು ಶ್ರೀಮಂತರಿಗೆ ಸಮರ್ಪಣೆ ಮಾಡಿದ ಪಾಪದ ಫಲವಷ್ಟೇ ಇದು. ಉಕ್ರೇನ್ ದೇಶದಿಂದ ವಾಪಸ್ ಬಂದ ರಾಜ್ಯದ 700ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವೈದ್ಯಶಿಕ್ಷಣ ಸಚಿವ ಸುಧಾಕರ್ ಅವರು ಕೊಟ್ಟ ಭರವಸೆ ಏನಾಯಿತು? ರಾಜ್ಯ ಸರಕಾರವು ಕೇಂದ್ರದ ಕಡೆ ಮುಖ ಮಾಡಿ ಕೂತಿದೆ, ಇದು ಸರಿಯಲ್ಲ. ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ' ಎಂದು ಆಗ್ರಹಿಸಿದರು.
'ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಮಧ್ಯಪ್ರವೇಶ ಮಾಡಿ ವಿದ್ಯಾರ್ಥಿಗಳ ಹಿತರಕ್ಷಣೆ ಮಾಡಲೇಬೇಕು. ಇತ್ತ ಭಾರತದಲ್ಲೂ ವ್ಯಾಸಂಗ ಮಾಡಲಾಗದೆ, ಅತ್ತ ಉಕ್ರೇನ್ʼಗೂ ಮರಳಿ ಹೋಗಲಾರದೆ ಈ ವಿದ್ಯಾರ್ಥಿಗಳೆಲ್ಲರೂ ಅತಂತ್ರ ಸ್ಥಿತಿಯಲ್ಲಿದ್ದಾರೆ' ಎಂದು ತಿಳಿಸಿದರು.
'ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ & ವೈದ್ಯಶಿಕ್ಷಣ ಹೆಚ್ಚು ದುಬಾರಿ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುತ್ತಿದ್ದಾರೆ.
ನಮ್ಮಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯು ಹಣವಂತರು, ರಾಜಕಾರಣಿಗಳ ಕಪಿಮುಷ್ಠಿಯಲ್ಲಿದೆ. ಶಿಕ್ಷಣ ಲಾಭದಾಯಕ ಉದ್ಯಮವಾಗಿ ಬಡ-ಮಧ್ಯಮ ವರ್ಗದ ಮಕ್ಕಳಿಗೆ ವೈದ್ಯಶಿಕ್ಷಣ ಗಗನಕುಸುಮವಾಗಿದೆ' ಎಂದರು.
ನೀಟ್ ಅನ್ನು ಬಲವಂತವಾಗಿ ಹೇರಿ, ಟ್ಯೂಷನ್ ಅಂಗಡಿಗಳಿಗೆ ಬಿಸಿನೆಸ್ ಮಾಡಿಕೊಟ್ಟು, ವೈದ್ಯ ಶಿಕ್ಷಣವನ್ನು ಬಡ-ಮಧ್ಯಮ ವರ್ಗದ ಮಕ್ಕಳಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ. ಇದು ಶೈಕ್ಷಣಿಕ ಅನ್ಯಾಯ-ಅಸಮಾನತೆ ಹೆಚ್ಚಿಸುತ್ತಿದೆಯಷ್ಟೇ ಅಲ್ಲ, ಸಂವಿಧಾನದ ಆಶಯಕ್ಕೂ ವಿರುದ್ಧವಾಗಿದೆ. ಉಕ್ರೇನ್ʼನಿಂದ ಬಂದ ವಿದ್ಯಾರ್ಥಿಗಳ ಬಗ್ಗೆ ಉಪೇಕ್ಷೆ ಮಾಡಿದರೆ ಸಹಿಸುವ ಪ್ರಶ್ನೆ ಇಲ್ಲ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಕೇಂದ್ರ-ರಾಜ್ಯ ಸರಕಾರಗಳ ಹೊಣೆ ಎಂದು ಹೇಳಿದರು.
'ಇನ್ನಾದರೂ ನೀಟ್ ವಿರುದ್ಧ ಎಲ್ಲಾ ರಾಜ್ಯಗಳು ಸಂಘಟಿತವಾಗಿ ದನಿ ಎತ್ತಬೇಕಿದೆ' ಎಂದು ಕುಮಾರಸ್ವಾಮಿ ತಿಳಿಸಿದರು.
ನೀಟ್ ಅನ್ನು ಬಲವಂತವಾಗಿ ಹೇರಿ, ಟ್ಯೂಷನ್ ಅಂಗಡಿಗಳಿಗೆ ಬಿಸಿನೆಸ್ ಮಾಡಿಕೊಟ್ಟು, ವೈದ್ಯ ಶಿಕ್ಷಣವನ್ನು ಬಡ-ಮಧ್ಯಮ ವರ್ಗದ ಮಕ್ಕಳಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ. ಇದು ಶೈಕ್ಷಣಿಕ ಅನ್ಯಾಯ-ಅಸಮಾನತೆ ಹೆಚ್ಚಿಸುತ್ತಿದೆಯಷ್ಟೇ ಅಲ್ಲ, ಸಂವಿಧಾನದ ಆಶಯಕ್ಕೂ ವಿರುದ್ಧವಾಗಿದೆ. 6/7
— H D Kumaraswamy (@hd_kumaraswamy) April 25, 2022







