ಪ್ರಿಯಾಂಕ್ ಖರ್ಗೆಗೆ ನೋಟಿಸ್: ಸರಕಾರಕ್ಕೆ ಡಿಕೆಶಿ ತೀವ್ರ ತರಾಟೆ

ಬೆಂಗಳೂರು, ಎ.25: ಪಿಎಸ್ಸೈ ನೇಮಕಾತಿ ಪರೀಕ್ಷೆ ಅಕ್ರಮ ಬಯಲಿಗೆಳೆದ ಮಾಜಿ ಸಚಿವ, ಕಾಂಗ್ರೆಸ್ ವಕ್ತಾರ ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ನೋಟಿಸ್ ಜಾರಿ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜ್ಯ ಬಿಜೆಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,‘ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾಂಗಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರಸ್ತಂಭಗಳು. ನಾವು ವಿರೋಧ ಪಕ್ಷದಲ್ಲಿದ್ದು, ರಾಜ್ಯದುದ್ದಗಲಕ್ಕೂ ಅನೇಕ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಮಗೂ ಬೇರೆ ಬೇರೆ ಮೂಲಗಳಿಂದ ಭ್ರಷ್ಟಾಚಾರ, ಅಕ್ರಮ, ಅನ್ಯಾಯಗಳ ಬಗ್ಗೆ ಸಾಕಷ್ಟು ಮಾಹಿತಿಗಳು ಲಭ್ಯವಾಗುತ್ತವೆ.
ಇಂತಹ ದೂರು, ಅಹವಾಲುಗಳನ್ನು ಸ್ವೀಕರಿಸಲು ಸಾರ್ವಜನಿಕ ಅಹವಾಲು ಸಮಿತಿಯನ್ನೇ ರಚಿಸಲಾಗಿದೆ. ಅಹವಾಲು, ಸಮಸ್ಯೆ ಹೇಳಿಕೊಂಡವರಿಗೆ ಸಹಾಯ, ಅವರ ಪರ ಧ್ವನಿ ಎತ್ತುವ ಕೆಲಸ ಮಾಡಿಕೊಂಡು ಬಂದಿದ್ದೇವೆ.
ಮೂರು ವರ್ಷದಿಂದ ಸರ್ಕಾರದ ಅನೇಕ ಭ್ರಷ್ಟಾಚಾರಗಳ ಬಗ್ಗೆ ಮಾಹಿತಿ ಬಂದಿದ್ದು, ಒಂದೊಂದೇ ವಿಚಾರವನ್ನು ನಾವು ಸರ್ಕಾರ, ಸಾರ್ವಜನಿಕರ ಗಮನಕ್ಕೆ ತರುತ್ತಿದ್ದೇವೆ ಎಂದರು.
ಪಿಎಸ್ ಐ ನೇಮಕ ಅಕ್ರಮ ವಿಚಾರವಾಗಿ ನಮಗೆ ಮಾಹಿತಿ ಬಂದಾಗ ಅಧಿವೇಶನದಲ್ಲಿ ನಮ್ಮ ಶಾಸಕರಿಂದ ಪ್ರಶ್ನೆ ಕೇಳಿಸಿದೆವು. ಆಗ ಗೃಹ ಸಚಿವ ಅಗರ ಜ್ಞಾನೇಂದ್ರ ಅವರು ಯಾವುದೇ ಅಕ್ರಮ ನಡೆದಿಲ್ಲ ಎಂದು ಲಿಖಿತ ಉತ್ತರ ಕೊಟ್ಟಿದ್ದಾರೆ. ನಂತರ ಅನೇಕರು ನನ್ನನ್ನು ಭೇಟಿ ಮಾಡಿ, ಯಾರಿಗೆ ಎಷ್ಟು ಅಂಕ ಬಂದಿದೆ ಎಂದು ಉತ್ತರ ಪತ್ರಿಕೆ ತೋರಿಸಿದರು. ಕಲಬುರ್ಗಿಗೆ ಸಂಬಂಧಿಸಿದ ಅಕ್ರಮದ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಕೇವಲ ಶಾಸಕರಲ್ಲ. ಪಕ್ಷದ ವಕ್ತಾರರೂ ಹೌದು. ಕೆಲವು ವಿಚಾರವನ್ನು ಕೃಷ್ಣಭೈರೇಗೌಡರಿಂದ ಮತ್ತೆ ಕೆಲವು ವಿಚಾರವನ್ನು ಬಿ.ಎಲ್ ಶಂಕರ್ ಅವರಿಂದ, ಮೈಸೂರಿನ ಲಕ್ಷ್ಮಣ್ ಅವರಿಂದ ಮಾತನಾಡಿಸುತ್ತೇವೆ. ಮತ್ತೆ ಕೆಲವು ವಿಚಾರಗಳಲ್ಲಿ ನಾನು, ಸಿದ್ದರಾಮಯ್ಯ ಮಾತನಾಡುತ್ತೇವೆ. ಅದೇ ರೀತಿ ಪ್ರಿಯಾಂಕ್ ಖರ್ಗೆ ಈ ವಿಚಾರವಾಗಿ ಮಾತನಾಡಿದ್ದಾರೆ ಎಂದರು.
ಅನ್ಯಾಯದ ವಿರುದ್ಧ ಧ್ವನಿ ಎತ್ತಿರುವ ನಮ್ಮ ದಲಿತ ನಾಯಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇದು ನಮಗಾಗುತ್ತಿರುವ ಅನ್ಯಾಯ ಎಂದು ಅನೇಕ ದಲಿತ ಮುಖಂಡರು ರಾಜ್ಯಾದ್ಯಂತ ಧರಣಿ ಮಾಡುವುದಾಗಿ ನನ್ನ ಮನೆಗೇ ಬಂದು ಹೇಳುತ್ತಿದ್ದಾರೆ. ಇನ್ನು ಮಲ್ಲಿಕಾರ್ಜುನ ಖರ್ಗೆ ಸಾಹೇಬರು, ಆಸ್ಕರ್ ಫೆರ್ನಾಂಡಿಸ್ ಅವರ ಜಾಗಕ್ಕೆ ಟ್ರಸ್ಟಿಯಾಗಿ ಮೂರು ತಿಂಗಳ ಹಿಂದೆ ನೇಮಕವಾಗಿದ್ದಾರೆ. ಅವರಿಗೆ ಇಡಿ ನೋಟಿಸ್ ಜಾರಿ ಮಾಡಿ, ಬೆಳಗ್ಗೆ-ರಾತ್ರಿ ವಿಚಾರಣೆ ಹೆಸರಲ್ಲಿ ಕಿರುಕುಳ ನೀಡಲಾಗುತ್ತಿದೆ. ಹಾಗಾದರೆ ಇವರ ವಿರುದ್ಧ ಯಾರೂ ಧ್ವನಿ ಎತ್ತಬಾರದೇ? ಎಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿರುವವರೆಲ್ಲ ಸತ್ಯಹರಿಶ್ಚಂದ್ರರೇ? ಕಾಂಗ್ರೆಸ್ ಪಕ್ಷ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಅಕ್ಷಯ ತೃತೀಯ ಸಂದರ್ಭದಲ್ಲಿ ಮುಸಲ್ಮಾನ ವ್ಯಾಪಾರಿಗಳಿಂದ ಚಿನ್ನಾಭರಣ ಖರೀದಿ ಮಾಡಬೇಡಿ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ. ಇದನ್ನೆಲ್ಲಾ ನೋಡಿಯೂ ಮುಖ್ಯಮಂತ್ರಿ ಏನು ಮಾಡುತ್ತಿದ್ದಾರೆ? ರಾಜ್ಯದ ಆರ್ಥಿಕತೆ ಏನಾಗಬೇಕು? ವ್ಯಾಪಾರ ವಹಿವಾಟುಗಳನ್ನು ಜಾತಿ, ಧರ್ಮದ ಬಣ್ಣ ಕಟ್ಟಿ ಮಾಡಲು ಸಾಧ್ಯವೇ? ರಾಜ್ಯದಲ್ಲಿ ಆರ್ಥಿಕ ಕುಸಿತ, ನಿರುದ್ಯೋಗ, ಅಶಾಂತಿ ಹೆಚ್ಚಾಗುತ್ತದೆ. ರಾಜಕೀಯ ಪಕ್ಷವಾಗಿ ನಾವು ಇದನ್ನೆಲ್ಲ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವೇ? ಎಂದು ಕಿಡಿಕಾರಿದರು.
ಸಚಿವರ ಜತೆ ಫೋಟೋ ತೆಗೆಸಿಕೊಂಡು, ಈ ಅಕ್ರಮದ ಪ್ರಮುಖ ಆರೋಪಿಗಳನ್ನು ತನಿಖಾಧಿಕಾರಿಗಳು ಮೊದಲು ತನಿಖೆ ಮಾಡಲಿ. ಇವರು ಕಳ್ಳರನ್ನು ಹಿಡಿಯಬೇಕೇ ಹೊರತು, ಅಕ್ರಮ ಬಯಲಿಗೆಳೆದವರಿಗೆ ನೋಟೀಸ್ ನೀಡುವುದಲ್ಲ. ಅಕ್ರಮ ಬಯಲು ಮಾಡಿದ ನಾಯಕರಿಗೆ ನೋಟೀಸ್ ಜಾರಿ ಮಾಡಿ ಮುಂದೆ ಯಾರೂ ನಿಮ್ಮ ವಿರುದ್ಧ ಧ್ವನಿ ಎತ್ತದಂತೆ ಮಾಡಲು ಪ್ರಯತ್ನಿಸುತ್ತಿದ್ದೀರಾ? ಹೆದರಿಸುತ್ತಿದ್ದೀರಾ? ಪ್ರಾಣ ಹೋದರೂ ಸರಿಯೇ, ನಮ್ಮ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದರು.
ಪಿಎಸ್ಐ ನೇಮಕ ಅಕ್ರಮದಲ್ಲಿ ಬಿಜೆಪಿಯವರೇ ಪ್ರಮುಖ ಆರೋಪಿಯಾಗಿದ್ದು, ನಮಗೆ ಅವರು ಯಾರು ಎಂದು ಗೊತ್ತೇ ಇಲ್ಲ ಎಂದು ಸಚಿವರು ಹೇಳಿದ್ದರು. ಆದರೆ ಮರುದಿನವೇ ಆರೋಪಿ ಜತೆ ಅವರು ಇರುವ, ಆರೋಪಿ ಮನೆಗೆ ಭೇಟಿ ಕೊಟ್ಟಿರುವ ಫೋಟೋಗಳು ಪ್ರಚಾರವಾಗಿವೆ. ಗೃಹ ಸಚಿವರು, ಬಿಜೆಪಿ ನಾಯಕರ ಜತೆಗೆ ಈ ಆರೋಪಿ ಇರುವ ಫೋಟೋಗಳಿವೆ. ಇವೆಲ್ಲವೂ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.
ನರ್ಸಿಂಗ್ ಕೌನ್ಸಿಲ್ ಗೆ ನಾಮನಿರ್ದೇಶನ, ದಿಶಾ ಸಮಿತಿಗೆ ಬಿಜೆಪಿ ನಾಯಕರನ್ನೇ ನೇಮಕ ಮಾಡಿದ್ದು, ಈಗ ನಮಗೂ ಅವರಿಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. ಬಿಜೆಪಿ ಅಕ್ರಮ ನೇಮಕಾತಿಯ ಅಂಗಡಿ ತೆರೆದಿರುವುದರಿಂದ ಬ್ಲಾಕ್ ಅಧ್ಯಕ್ಷರು, ಬಿಜೆಪಿ ಕಾರ್ಯಕರ್ತರು ಹಾಗೂ ಇತರರು ಹೋಗಿದ್ದಾರೆ. ಈ ಅಕ್ರಮವನ್ನು ನಾವು ಬಯಲಿಗೆಳೆದು ತಪ್ಪಿತಸ್ಥರನ್ನು ಹಿಡಿದು ಶಿಕ್ಷೆಗೆ ಒಳಪಡಿಸಿ ಎಂದು ಹೇಳಿದರೆ, ತಪ್ಪಿತಸ್ಥರನ್ನು ಹಿಡಿಯುವ ಬದಲು ಅಕ್ರಮ ಬಯಲಿಗೆಳೆದವರಿಗೆ ನೊಟೀಸ್ ಜಾರಿ ಮಾಡಿದ್ದಾರೆ.
ಈ ಅಕ್ರಮ ಬಯಲಿಗೆಳೆದ ಬೆನ್ನಲ್ಲೇ ಎಷ್ಟೇಲ್ಲ ನೇಮಕಾತಿ ಅಕ್ರಮಗಳು ಬೆಳಕಿಗೆ ಬರುತ್ತಿವೆ ನೀವೇ ನೋಡಿ. ಪಿಎಸ್ಐ, ಎಫ್ ಡಿಎ, ಪಿಡಬ್ಲ್ಯೂಡಿ ನೇಮಕಾತಿ ಅಕ್ರಮಗಳು ಬೆಳಕಿಗೆ ಬಂದಿವೆ. ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್ ಅವರು ನೀರಾವರಿ ಇಲಾಖೆ ಟೆಂಡರ್ ನಲ್ಲಿ ಶೇ. 20 ರಷ್ಟು ಕಮಿಷನ್ ಅಕ್ರಮ ನಡೆದಿದೆ ಎಂದರು. ಈ ವಿಚಾರದಲ್ಲಿ ಎಸಿಬಿ ಅವರು ಪ್ರಕರಣ ದಾಖಲಿಸಿ, ಅವರಿಗೆ ಯಾಕೆ ನೋಟಿಸ್ ನೀಡಲಿಲ್ಲ? ಯತ್ನಾಳ್ ಭ್ರಷ್ಟಾಚಾರ ವಿಚಾರವಾಗಿ ಮಾತನಾಡಿದ್ದಾರೆ. ಅವರಿಗೆ ಯಾಕೆ ನೋಟಿಸ್ ಜಾರಿ ಮಾಡಲಿಲ್ಲ?
ರಾಜ್ಯದಲ್ಲಿ ಏನಾಗುತ್ತಿದೆ? ಮುಖ್ಯಮಂತ್ರಿಗಳಿಗೆ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿ ಇದೆಯೋ, ಇಲ್ಲವೋ? ಈ ಪ್ರಕರಣದಲ್ಲಿ ಆರೋಪಿಯಾಗಿರುವರಿಂದ ಸನ್ಮಾನ ಮಾಡಿಸಿಕೊಂಡಿದ್ದೀರಲ್ಲಾ ನಿಮಗೂ ಅವರಿಗೂ ಹೇಗೆ ಸಂಪರ್ಕ ಎಂದು ತನಿಖಾಧಿಕಾರಿಗಳು ಗೃಹ ಸಚಿವರಿಗೆ ನೊಟೀಸ್ ಜಾರಿ ಮಾಡಬೇಕಿತ್ತು. ಯಾಕೆ ಮಾಡಿಲ್ಲ?’ ಡಿಕೆಶಿ ಪ್ರಶ್ನಿಸಿದರು.







