ಉಡುಪಿಯಲ್ಲಿ ಶೂನ್ಯ ನೆರಳಿನ ವಿದ್ಯಮಾನ ವೀಕ್ಷಣೆ
ಬ್ರಹ್ಮಾವರ, ಕುಂದಾಪುರದ ಜನರಿಗೆ ಎ.26ರಂದು ಈ ವಿದ್ಯಮಾನ ವೀಕ್ಷಿಸಬಹುದು!

ಉಡುಪಿ, ಎ.25: ಶೂನ್ಯ ನೆರಳಿನ ವಿದ್ಯಮಾನವನ್ನು ಇಂದು ಮಧ್ಯಾಹ್ನ 12:29ಕ್ಕೆ ಉಡುಪಿಯಲ್ಲಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸದಸ್ಯರು ವೀಕ್ಷಿಸಿದರು.
ಸಂಘದ ಯೂಟ್ಯೂಬ್ ಚಾನೆಲ್‌ನ ಮೂಲಕ 12:15ರಿಂದ 12:45ರ ತನಕ ಶೂನ್ಯ ನೆರಳಿನ ಕ್ಷಣದ ನೇರ ಪ್ರಸಾರವನ್ನು ಮಾಡಲಾಗಿತ್ತು. ವೀಕ್ಷಕರು ನೆರಳು ಕಣ್ಮರೆಯಾಗಿ ಹೋಗಿ ಪುನಃ ಕಾಣಿಸಿಕೊಳ್ಳುವುದನ್ನು ವೀಕ್ಷಿಸಿದರು. ಅನೇಕ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ತಮ್ಮ ಮನೆಯ ವಿವಿಧ ವಸ್ತುಗಳ ನೆರಳು ಮರೆಯಾಗುವ ಛಾಯಾಚಿತ್ರಗಳನ್ನು ಸೆರೆ ಹಿಡಿದರು. ಈ ಸಂದರ್ಭದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎ.ಪಿ.ಭಟ್ ಮತ್ತು ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಉಪಸ್ಥಿತರಿದ್ದರು.
ಬ್ರಹ್ಮಾವರ ಮತ್ತು ಕುಂದಾಪುರದ ಜನರು ಎ.26ರಂದು ಮಧ್ಯಾಹ್ನ 12:20ರಿಂದ 12:30ರ ನಡುವೆ ಈ ವಿದ್ಯಮಾನವನ್ನು ವೀಕ್ಷಿಸಬಹುದು.
Next Story