ಜಾಮೀನು ಪಡೆದ ಬೆನ್ನಲ್ಲೇ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಮತ್ತೆ ಬಂಧನ
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟ್ ಮಾಡಿದ ಪ್ರಕರಣ

ಗುವಾಹತಿ, ಎ 25: ಹೊಸ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಪೊಲೀಸರು ಸೋಮವಾರ ಮತ್ತೆ ಬಂಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ಗಳನ್ನು ಮಾಡಿದ ಪ್ರಕರಣದಲ್ಲಿ ಅಸ್ಸಾಂನ ನ್ಯಾಯಾಲಯ ಜಾಮೀನು ನೀಡಿದ ದಿನವೇ ಅವರನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಟ್ವೀಟ್ಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾಮೀನು ಅರ್ಜಿಯ ಮೇಲಿನ ತನ್ನ ಆದೇಶವನ್ನು ನ್ಯಾಯಾಲಯ ನಿನ್ನೆ ಕಾಯ್ದಿರಿಸಿತ್ತು.
ಜಿಗ್ನೇಶ್ ಮೇವಾನಿ ಅವರನ್ನು ಬಂಧಿಸಲು ಆಗಮಿಸಿದ ಅಸ್ಸಾಂನ ಬಾರ್ಪೇಟ ಪೊಲೀಸರು ಮೇವಾನಿ ಅವರನ್ನು ಯಾವ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಬಂಧಿಸಲಾಗುತ್ತಿದೆ ಎಂದು ಇದುವರೆಗೆ ಹೇಳಿಲ್ಲ. ಅಸ್ಸಾಂನ ಕೊಕ್ರಝಾರ್ನ ಸ್ಥಳೀಯ ಬಿಜೆಪಿ ನಾಯಕರೋರ್ವರು ದೂರು ದಾಖಲಿಸಿದ ಬಳಿಕ ಅಸ್ಸಾಂ ಪೊಲೀಸರ ತಂಡ ಗುಜರಾತ್ನ ಪಾಲನ್ಪುರದಿಂದ ಮೇವಾನಿ ಅವರನ್ನು ಗುರುವಾರ ಮೊದಲ ಬಾರಿಗೆ ಬಂಧಿಸಿತ್ತು.‘‘ಇದು ಬಿಜೆಪಿ ಹಾಗೂ ಆರೆಸ್ಸೆಸ್ನ ಪಿತೂರಿ.
ಅವರು ನನ್ನ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಲು ಹೀಗೆ ಮಾಡಿದ್ದಾರೆ. ಅವರು ಇದನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಅವರು ಇದನ್ನು ರೋಹಿತ್ ವೇಮುಲಾರಿಗೆ, ಚಂದ್ರಶೇಖರ್ ಆಝಾದ್ ಅವರಿಗೆ ಮಾಡಿದರು. ಈಗ ಅವರು ನನ್ನನ್ನು ಗುರಿಯಾಗಿರಿಸಿದ್ದಾರೆ’’ ಎಂದು ಅವರು ಹೇಳಿದ್ದಾರೆ. 41ರ ಹರೆಯದ ಮೇವಾನಿ ವಿರುದ್ಧ ಕ್ರಿಮಿನಲ್ ಪಿತೂರಿ, ಆರಾಧನಾ ಸ್ಥಳಕ್ಕೆ ಸಂಬಂಧಿಸಿದ ಅಪರಾಧ, ಧಾರ್ಮಿಕ ಭಾವನೆಗಳನ್ನು ಕೆರಳಿಸಿರುವುದು, ಶಾಂತಿ ಭಂಗಕ್ಕೆ ಕಾರಣವಾಗಬಹುದಾದ ಪ್ರಚೋದನೆ ಮೊದಲಾದ ಆರೋಪಗಳನ್ನು ಮಾಡಲಾಗಿದೆ. ಬಿಜೆಪಿ ನಾಯಕ ಅರೂಪ್ ಕುಮಾರ್ ದೇವ್ ತನ್ನ ದೂರಿನಲ್ಲಿ ಮೇವಾನಿ ಅವರ ಟ್ವೀಟ್ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಸಮೂಹದ ಒಂದು ವಿಭಾಗವನ್ನು ಪ್ರಚೋದಿಸುವ ಸಾಧ್ಯತೆ ಇದೆ ಆರೋಪಿಸಿದ್ದರು.







