ತಪ್ಪಿತಸ್ಥರನ್ನು ಬಂಧಿಸುವ ಬದಲು ನನಗೆ ನೋಟಿಸ್ ನೀಡಿದ್ದಾರೆ: ಪ್ರಿಯಾಂಕ್ ಖರ್ಗೆ ಆರೋಪ
ಪಿಎಸ್‍ಐ ನೇಮಕದಲ್ಲಿ ಅಕ್ರಮ ಪ್ರಕರಣ

ಬೆಂಗಳೂರು, ಎ.25: ಪಿಎಸ್‍ಐ ನೇಮಕದಲ್ಲಿ ಅಕ್ರಮ ಎಸಗಿದವರನ್ನು ಬಂಧಿಸುವ ಬದಲು ಪ್ರಶ್ನಿಸಿದ ನನಗೆ ನೋಟಿಸ್ ನೀಡುವುದು ಎಷ್ಟು ಸರಿ ಎಂದು ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.
ಸೋಮವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವೇನು ಕತ್ತೆ ಕಾಯ್ತಿದ್ದೀರ, ಕಡ್ಲೆಪುರಿ ತಿನ್ನುತ್ತಿದ್ದೀರಾ? ಆರೋಪಿ ಮೇಲೆ ಯಾಕೆ ಎಫ್‍ಐಆರ್ ದಾಖಲಿಸಿಲ್ಲ. ಇದರಲ್ಲಿ ಇಲಾಖೆಯೂ ಶಾಮೀಲಾಗಿದೆ ಅಂದುಕೊಳ್ಳಬಹುದಾ? ಪ್ರಕರಣದಲ್ಲಿ ಭಾಗಿ ಆಗಿರುವವರು ಯಾರು? ಯಾಕೆ ಅವರನ್ನ ನೀವು ವಿಚಾರಣೆಗೆ ಕರೆದಿಲ್ಲ. ನೇಮಕಾತಿ ಮುಖ್ಯಸ್ಥರನ್ನು ಗೃಹ ಸಚಿವರು, ಇಲ್ಲಿಯವರೆಗೆ ಯಾಕೆ ವಿಚಾರಣೆಗೆ ಕರೆದಿಲ್ಲ. ನೇಮಕಾತಿ ಮಾಡುವವರನ್ನ ತನಿಖೆಗೆ ಯಾಕೆ ಒಳಪಡಿಸಿಲ್ಲ. ಗೃಹ ಸಚಿವರು ಆರೋಪಿ ಮನೆಗೆ ಹೋಗಿದ್ದಾರೆ, ದಿವ್ಯಾ ಹಾಗರಗಿ ಮನೆಗೂ ಹೋಗಿದ್ದಾರೆ. ಅವರ ಮನೆಯಲ್ಲಿ ಸನ್ಮಾನ ಮಾಡಿಸಿಕೊಂಡಿದ್ದಾರೆ. ಬಾದಾಮಿ, ಗೋಡಂಬಿ, ಕಿಸ್ಮಿಸ್ ತಿಂದು ಬರುತ್ತಾರೆ. ಯಾಕೆ ಗೃಹ ಸಚಿವರಿಗೆ ನೋಟಿಸ್ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.
ಜ್ಞಾನಜ್ಯೋತಿ ತರಬೇತಿ ಸಂಸ್ಥೆ ಪರೀಕ್ಷಾ ಕೇಂದ್ರವಲ್ಲ. ಹಾಗಂತ ಕಲಬುರಗಿಯಲ್ಲಿ ಲೆಟರ್ ಕೊಟ್ಟಿದ್ದಾರೆ. ಸುನೀಲ್ ಕುಮಾರ್, ಪ್ರಿಯಾಂಕ್ ತನಿಖೆ ಮಾಡಿ ಎಂದು ಹೇಳುತ್ತಾರೆ. ಸ್ವಾಮಿ ಸುನೀಲ್, ಮೊದಲು ಗೃಹ ಸಚಿವರನ್ನ ತನಿಖೆಗೊಳಪಡಿಸಿ. ಗೃಹ ಸಚಿವರೇ ಆರೋಪಿ ಮನೆಗೆ ಹೋಗಿ ಬರುತ್ತಾರೆ. ಸಿಎಂ, ಗೃಹ ಸಚಿವರಿಗಿಂತ ನಾನು ಪ್ರಭಾವಿಯೇ? ನಾನು ಪ್ರಭಾವಿಯಾಗಿದ್ದಾರೆ ಬಂಧನ ಮಾಡಿಸಿ. ದಿವ್ಯಾ ಹಾಗರಗಿ ಚಿಕ್ಕ ಚಿಕ್ಕ ಮೀನುಗಳಷ್ಟೇ. ಇವರು ಹಣ ಕಲೆಕ್ಟ್ ಮಾಡೋರು. ಅವರು ಕಲೆಕ್ಟ್ ಮಾಡಿದ್ದು ಎಲ್ಲಿಗೆ ಹೋಗುತ್ತೆ. ಅದು ಬೆಂಗಳೂರಿಗೆ ಬರುತ್ತೆ. ಅಧಿಕಾರಿಗಳು, ಶಾಸಕರು, ಬಿಜೆಪಿ ಕಚೇರಿಗೂ ಹೋಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕ ರೇಣುಕಾಚಾರ್ಯ ಯುವಕರ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಎಸ್‍ಸಿ ಸರ್ಟಿಪಿಕೇಟ್ ಪಡೆದವರು ಯಾರು? ದಲಿತ ಯುವಕರ ಅವಕಾಶ ಕಿತ್ತವರು ಯಾರು. ಕಿವಿ ಮೇಲೆ ಲಾಲ್ ಬಾಗ್ ಇಟ್ಟಿದ್ದಾರೆ ಎಂದು ಹೇಳುತ್ತಾರೆ. ದಲಿತರ ಮೀಸಲಾತಿ ಕಿತ್ತುಕೊಂಡವರು ನೀವೇ ಅಲ್ವೇ? ನಿಮ್ಮದೇ ಸರಕಾರ, ನಿಮ್ಮದೇ ಅಧಿಕಾರಿ ಇದ್ದಾರೆ. ಸರಿಯಾದ ತನಿಖೆ ಯಾಕೆ ನಡೆಯುತ್ತಿಲ್ಲ. ಸಿಎಂ, ಕಟೀಲ್, ಯತ್ನಾಳ್ ಅವರಿಂದ ಸಲಹೆ ಪಡೆದುಕೊಳ್ಳಲಿ. ಗೃಹ ಸಚಿವರು ಸರಿಯಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ. ಅವರ ಸಲಹೆಯನ್ನ ಸರಕಾರ ಪಡೆದುಕೊಳ್ಳಲಿ ಎಂದರು.
ಸರಕಾರದ ತಾಳಕ್ಕೆ ಕುಣಿಯುವವನು ನಾನಲ್ಲ. ನಾನೊಬ್ಬ ಜನಪ್ರತಿನಿಧಿ, ಜನರಿಂದ ಬಂದವನು. ಸಾರ್ವಜನಿಕರ ಸಮಸ್ಯೆ ಎತ್ತಿಹಿಡಿಯುವುದು ನನ್ನ ಕೆಲಸ. ನಿಮ್ಮ ವೈಫಲ್ಯ ನಾವು ಬಿಚ್ಚಿಡಬಾರದಾ? ನಾನು 15 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಸಾಕಷ್ಟು ಜನ ಸಮಸ್ಯೆ ಹೊತ್ತು ಬರುತ್ತಾರೆ. ಅನ್ಯಾಯ ಆದಾಗ ನಮ್ಮ ಬಳಿ ಬರುತ್ತಾರೆ. ಅವರ ಸಮಸ್ಯೆಯನ್ನ ಎತ್ತಿಹಿಡಿಯೋ ಕೆಲಸ ನಮ್ಮದು. ನಿಮ್ಮ ತಾಳಕ್ಕೆ ತಕ್ಕಂತೆ ಕುಣಿಯೋಕೆ ಆಗಲ್ಲ. ಪ್ರಕರಣ ಮುಚ್ಚಿ ಹಾಕಲು ಇಂತವೆಲ್ಲ ಕೆಲಸ ಮಾಡುತ್ತಿದ್ದೀರಿ. ನೀವು ಬಡವರಿಗೆ ನ್ಯಾಯ ಕೊಡಿಸೋ ಕೆಲಸ ಮಾಡುತ್ತಿಲ್ಲ. ಪ್ರಮೋದ್ ಮುತಾಲಿಕ್ ನಿಮ್ಮ ವಿರುದ್ಧವೇ ಮಾತನಾಡುತ್ತಿದ್ದಾರೆ. ಗಂಡಸ್ತನ ತೋರಿಸಿ ಅಂತ ಸರಕಾರಕ್ಕೆ ಉಗಿಯುತ್ತಿದ್ದಾರೆ. ಗೃಹ ಸಚಿವರು ಸರಿ ಇಲ್ಲ ಅಂತ ಉಗಿಯುತ್ತಿದ್ದಾರೆ. ಯುವಕರು ಹುದ್ದೆ ಬಿಟ್ಟುಹೋಗಿ ಎನ್ನುತ್ತಾರೆ. ಆಡಿಯೋ ಬಿಡುಗಡೆ ಮಾಡಿದ ಮೇಲೆ ನನ್ನ ಮೇಲೆ ವೈಯಕ್ತಿಕ ಟಾರ್ಗೆಟ್ ಮಾಡಲಾಗುತ್ತಿದೆ. ನನ್ನ ಟ್ವಿಟರ್ ಖಾತೆ ಹ್ಯಾಕ್ ಆಗುತ್ತೆ. ಅಂತರ್‍ರಾಷ್ಟ್ರೀಯ ಮಟ್ಟದ ಬೆದರಿಕೆ ಕರೆ ಬರುತ್ತಿವೆ. ಅದಕ್ಕೆ ಪೂರಕವಾಗಿ ಸಿಐಡಿ ನೋಟಿಸ್ ಬರುತ್ತದೆ. ಇದೆಲ್ಲವೂ ಏನು, ನನ್ನ ಮೇಲೆ ವೈಯಕ್ತಿಕ ಟಾರ್ಗೆಟ್. ಒಂದೊಂದೇ ಅಕ್ರಮಗಳು ಹೊರಬರುತ್ತಿವೆ. ಕೋಟಿ ಖರ್ಚು ಮಾಡಿ ಹುದ್ದೆ ಪಡೆದವರು ಏನು ಮಾಡುತ್ತಾರೆ. ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರಾ? ಸಾರ್ವಜನಿಕರ ಜೇಬಿಗೆ ಕೈ ಹಾಕುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ದಿವ್ಯಾ ಹಾಗರಗಿ ಎಲ್ಲಿ ಪತ್ತೆಯಿಲ್ಲ. ಇಲ್ಲಿಯವರೆಗೆ ಅವರನ್ನ ರಕ್ಷಣೆ ಮಾಡ್ತಿರೋದೇಕೆ? ಎಲ್ಲಿದ್ದಾರೆ ಪ್ರಮುಖ ಆರೋಪಿ ದಿವ್ಯಾ ಹಾಗರಗಿ. ಹಾಗರಗಿ ಎಲ್ಲಿ ಅಂತ ಜನ ಕೇಳುತ್ತಿದ್ದಾರೆ. ಮೊದಲು ಅವರನ್ನ ಪತ್ತೆ ಹಚ್ಚುವ ಕೆಲಸ ಮಾಡಿ. ಅವರನ್ನ ರಕ್ಷಣೆ ಮಾಡೋ ಕೆಲಸ ಮಾಡಬೇಡಿ. ಸಾವಿರಾರು ಯುವಕರ ಭವಿಷ್ಯ ಹಾಳಾಗುತ್ತಿದೆ. ಪ್ರಕರಣದ ತನಿಖೆಯನ್ನ ಗಂಭೀರವಾಗಿ ಮಾಡಿ. ನನಗೆ ರವಿವಾರದಿಂದ ಕರೆಗಳು ಬರುತ್ತಿವೆ. ಏನಪ್ಪಾ ನಿನ್ನದು ಜಾಸ್ತಿಯಾಗಿದೆ. ಯಾಕಿಷ್ಟು ಮಾತನಾಡುತ್ತಿದ್ಯಾ? ಕೇಂದ್ರ, ರಾಜ್ಯದಲ್ಲೂ ನಮ್ಮದೇ ಸರಕಾರವಿದೆ. ಇದು ನಿನಗೆ ಗೊತ್ತಿಲ್ವಾ ಅಂತ ಕರೆ ಮಾಡಿದವರು ಹೇಳಿದರು. ಕರೆ ಮಾಡಿ ಹಿಂದಿಯಲ್ಲಿ ಬೆದರಿಕೆ ಹಾಕಿದರು. ಎರಡೂ ಕಡೆ ನಮ್ಮದೇ ಸರಕಾರ ಅಂದರೆ ಏನು? ಬಿಜೆಪಿಯವರೇ ಇರಬಹುದಲ್ವಾ. ನನ್ನ ಸೆಕ್ಯೂರಿಟಿ 3 ವರ್ಷದ ಹಿಂದೆ ತೆಗೆಯಲಾಗಿದೆ. ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ನಾನೇ ಭೇಟಿ ಮಾಡಿದ್ದೆ. ಸೆಕ್ಯೂರಿಟಿ ಬಗ್ಗೆ ಆಗ ಕೇಳಿದ್ದೆ. ಆದರೆ ಯಾವ ಸೆಕ್ಯೂರಿಟಿ ನನಗೆ ಕೊಟ್ಟಿಲ್ಲ ಎಂದರು.
ಕಳೆದ ಮೂರು ವರ್ಷಗಳಿಂದ ಎಷ್ಟು ಪರೀಕ್ಷೆ ಆಗಿದೆ. ಆ ಎಲ್ಲಾ ಪರೀಕ್ಷೆಗಳ ತನಿಖೆಯಾಗಬೇಕು. ಬಡಪ್ರತಿಭಾವಂತರಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.
ಯಾವುದಕ್ಕೂ ಜಗ್ಗಲ್ಲ: ಪ್ರಿಯಾಂಕ್ ಖರ್ಗೆ
ಆಡಿಯೋ ಸಾಕ್ಷ್ಯ ಬಿಡುಗಡೆ ಮಾಡಿದ ತಮ್ಮನ್ನು ಸರಕಾರ ಟಾರ್ಗೆಟ್ ಮಾಡುತ್ತಿದೆ. ಎಲ್ಲವನ್ನು ಹೆದರಿಸುತ್ತೇನೆ. ಯಾವುದಕ್ಕೂ ಜಗ್ಗಲ್ಲ. ಕಳೆದ ಮೂರು ವರ್ಷಗಳಿಂದ ನಡೆದಿರುವ ನೇಮಕಾತಿ ಪರೀಕ್ಷೆಗಳನ್ನು ತನಿಖೆಗೆ ಒಳಪಡಿಸಬೇಕೆಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.







