ಸಾಲ ಬಾಧೆ: ಕೆರೆಗೆ ಹಾರಿ ಯುವಕ ಆತ್ಮಹತ್ಯೆ

ವಿಜಯ್ - ಆತ್ಮಹತ್ಯೆ ಮಾಡಿಕೊಂಡ ಯುವಕ
ಚಾಮರಾಜನಗರ : ಸಾಲ ಬಾಧೆಗೆ ಹೆದರಿದ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಪುರ ಸಮೀಪದ ಕಲ್ಕಟ್ಟೆ ಕರೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೆಟ್ಟಳ್ಳಿ ಗ್ರಾಮದ ವಿಜಯ್ (27) ಎಂಬ ಯುವಕ ತನ್ನ ಸ್ನೇಹಿತರೊಂದಿಗೆ ಶಿವಪುರ ಸಮೀಪದ ಕಲ್ಕಟ್ಟೆ ಕೆರೆ ಬಳಿ ಬಂದು , 'ನೀನು ಮನೆಯವರಿಗೆ ತಿಳಿಸಿ ಬಿಡು ನಾನು ಸಾಲ ತೀರಿಸಲಾಗದೆ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ' ಎಂದು ಹೇಳಿ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗುತ್ತಿದೆ.
ವಿಜಯ್ ಗೆ ಎಷ್ಟು ಪ್ರಮಾಣದಲ್ಲಿ ಸಾಲ ಇತ್ತೆಂದು ನಿಖರವಾಗಿ ತಿಳಿದು ಬಂದಿಲ್ಲವಾದರೂ ಸಹ ಸ್ನೇಹಿತರ ಬಳಿ ತನಗೆ ಸಾಲವಿದೆ ಎನ್ನುತ್ತಿದ್ದನು ಎನ್ನಲಾಗುತ್ತಿದ್ದು , ಸಾಲದ ಬಾಧೆಗೆ ಯುವಕನೊಬ್ಬ ಕೆರೆಗೆ ಹಾರಿ ಪ್ರಾಣಕಳೆದುಕೊಂಡಿದ್ದು, ಕುಟುಂಬದಲ್ಲಿ ಆತಂಕ ಸೃಷ್ಟಿಸಿದೆ.
ಗುಂಡ್ಲುಪೇಟೆ ಪೊಲೀಸ್ ಠಾಣೆಯಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.





