ಸುರಕ್ಷತಾ ಕ್ರಮಕ್ಕೆ ಎಡಿಸಿ ನೇತೃತ್ವದಲ್ಲಿ ಉಪಸಮಿತಿ ರಚನೆ: ಉಡುಪಿ ಜಿಲ್ಲಾಧಿಕಾರಿ
ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿನ ದುರಂತ ಪ್ರಕರಣ

ಉಡುಪಿ, ಎ.25: ಮಲ್ಪೆಯ ಸೈಂಟ್ ಮೇರಿಸ್ ದ್ವೀಪದಲ್ಲಿ ಇತ್ತೀಚೆಗೆ ನಡೆದ ದುರಂತಕ್ಕೆ ಸಂಬಂಧಿಸಿದಂತೆ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉಪ ಸಮಿತಿಯನ್ನು ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ದುರ್ಘಟನೆ ಸಂಭವಿಸದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.
ಉಡುಪಿಯ ಪತ್ರಿಕಾ ಭವನಕ್ಕೆ ಸೋಮವಾರ ಭೇಟಿ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತಾಡುತಿದ್ದರು. ಅಪರ ಜಿಲ್ಲಾಧಿಕಾರಿ ನೇತೃತ್ವದ ತಂಡ ಸೈಂಟ್ ಮೇರಿಸ್ ದ್ವೀಪಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನಾನು ಕೂಡ ಮಲ್ಪೆ ಬೀಚ್‌ಗೆ ತೆರಳಿ ಈ ವಿಚಾರಗಳ ಕುರಿತು ಚರ್ಚೆ ನಡೆಸಿದ್ದೇನೆ. ಕೆಲವೊಂದು ಕ್ರಮ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದೇನೆ ಎಂದು ಹೇಳಿದರು.
ಶಾಲಾ ಕಾಲೇಜುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವಾಸ ಬಂದಾಗ ಇಂತಹ ಅನಾಹುತಗಳು ಸಂಭವಿಸುತ್ತಿದ್ದು, ಆದುದರಿಂದ ಸಂಸ್ಥೆಯ ಪ್ರಮುಖರು ವಿದ್ಯಾರ್ಥಿಗಳ ಜವಾಬ್ದಾರಿ ವಹಿಸಿಕೊಳ್ಳಬೇಕು. ಎರಡು ದುರಂತಗಳು ಮೊಬೈಲ್‌ನಲ್ಲಿ ಸೆಲ್ಫಿ ತೆಗೆಯುವಾಗ ನಡೆದಿರುವುದರಿಂದ ಸುರಕ್ಷಿತವಾದ ಸ್ಥಳದಲ್ಲಿ ಸೆಲ್ಫಿ ಪಾಯಿಂಟ್ ನಿರ್ಮಿಸುವ ಕುರಿತು ಸಲಹೆಗಳು ಬಂದಿವೆ. ಈ ಬಗ್ಗೆ ಸಮಿತಿ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.ಸೈಂಟ್ ಮೇರಿಸ್‌ನಲ್ಲಿ ಪ್ರವಾಸಿಗರ ಹಿತದೃಷ್ಠಿಯಿಂದ ತಕ್ಷಣಕ್ಕೆ ಬೇಕಾದ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಅಪಾಯಕಾರಿ ಸ್ಥಳದಲ್ಲಿ ತಡೆಬೇಲಿ, ಕೆಂಪು ಧ್ವಜಗಳನ್ನು ಆಳವಡಿಸಲಾಗಿದೆ. ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಫಲಕಗಳನ್ನು ಕೂಡ ಹಾಕಲಾಗಿದೆ. ಪ್ರಾಕೃತಿಕವಾದ ವಾಚ್ ಟವರ್ ಕೂಡ ನಿರ್ಮಿಲಾಗಿದೆ ಎಂದು ಅವರು ಹೇಳಿದರು.
ದ್ವೀಪದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಈಗಾಗಲೇ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಯಾವ ರೀತಿ ಅನಾಹುತ ಸಂಭವಿಸಿದೆ ಎಂದು ತಿಳಿಸಲು ಹೇಳಿದ್ದೇನೆ. ಘಟನೆ ಹೇಗೆ ಸಂಭವಿಸಿದೆ ಎಬುದರ ಬಗ್ಗೆ ಸಮಗ್ರ ತನಿಖೆ ಮಾಡಲು ಸೂಚಿಸಿದ್ದೇನೆ. ಅದರಲ್ಲಿ ತಪ್ಪಿತಸ್ಥರಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಉಡುಪಿ ಮಠದಬೆಟ್ಟುವಿನಲ್ಲಿ ನಿರ್ಮಿಸುತ್ತಿರುವ ಸೇತುವೆಯಿಂದ ಪರಿಸರ ದಲ್ಲಿ ತ್ಯಾಜ್ಯ ನೀರು ಬಾವಿಗಳಿಗೆ ಹರಿದು ನೀರು ಮಲೀನಗೊಂಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಸಣ್ಣ ನೀರಾವರಿ ಮತ್ತು ನಗರಸಭೆ ಅಧಿಕಾರಿಗಳನ್ನು ಸ್ಥಳಕ್ಕೆ ಹೋಗಿ ಪರಿಶೀಲಿಸಿ, ಸಮಸ್ಯೆ ಪರಿಹರಿಸಲು ಸೂಚನೆ ನೀಡುತ್ತೇನೆ ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತ ಪ್ರಕರಣಗಳಿಗೆ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಚಿವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಶೇಷ ಸಭೆಯನ್ನು ಕರೆದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಾಕಿ ಇರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಮುಂದೆ ಹಂತಹಂತವಾಗಿ ಕಾಮ ಗಾರಿ ಪೂರ್ಣಗೊಳಿಸಲಾಗುತ್ತದೆ. ಪ್ರಮುಖ ಸ್ಥಳಗಳಲ್ಲಿ ಆದಷ್ಟು ಬೇಗ ಕಾಮ ಗಾರಿ ಮುಗಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
‘ಅಧ್ಯಯನ ತಾಣವಾಗಿ ಅಭಿವೃದ್ಧಿ’
ಭೌಗೋಳಿಕವಾಗಿ ಅತ್ಯಂತ ಪ್ರಾಮುಖ್ಯ ಪಡೆದಿರುವ ವಿಶಿಷ್ಟವಾದ ಮಲ್ಪೆ ಸೈಂಟ್ ಮೇರಿಸ್ ದ್ವೀಪವನ್ನು ಅಧ್ಯಯನ ಉದ್ದೇಶದಿಂದ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದರು.ಮೋಜು ಮಸ್ತಿಗಿಂತ ಅಧ್ಯಯನದ ಹಿನ್ನೆಲೆಯಲ್ಲಿ ಈ ದ್ವೀಪವು ಅತ್ಯಂತ ಸೂಕ್ತವಾದ ತಾಣವಾಗಿದೆ. ಎಲ್ಲೂ ಇಲ್ಲದ ಅಪರೂಪ ಭೌಗೋಳಿಕತೆ ಇರುವ ಈ ದ್ವೀಪವನ್ನು ಅಧ್ಯಯನದ ಉದ್ದೇಶದಿಂದ ಬಳಸಿಕೊಳ್ಳಲು ಸಲಹೆಗಳು ಬಂದಿವೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಮಿತಿಯೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.