ಹೈಕೋರ್ಟ್ ನ್ಯಾ.ಎಸ್.ಸುಜಾತರಿಗೆ ವಕೀಲರಿಂದ ಬೀಳ್ಕೊಡುಗೆ
ಬೆಂಗಳೂರು, ಎ.25: ಮೇ 19ರಂದು ಸೇವೆಯಿಂದ ನಿವೃತ್ತರಾಗುತ್ತಿರುವ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಸುಜಾತಾ ಅವರಿಗೆ ಕರ್ನಾಟಕ ವಕೀಲರ ಸಂಘದಿಂದ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.
ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಅವರ ಕೋರ್ಟ್ ಹಾಲ್‍ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೀಳ್ಕೊಡುಗೆ ನೀಡಿ, ನಿವೃತ್ತ ಜೀವನಕ್ಕೆ ಶುಭ ಹಾರೈಸಲಾಯಿತು. ಮುಖ್ಯ ನ್ಯಾ.ರಿತುರಾಜ್ ಅವಸ್ಥಿ ಅವರು ನ್ಯಾಯಮೂರ್ತಿಯಾಗಿ ಸುಜಾತಾ ಅವರು ಸಲ್ಲಿಸಿದ ಸೇವೆ ಶ್ಲಾಘಿಸಿದರು.
ನ್ಯಾ.ಎಸ್.ಸುಜಾತಾ ಅವರು 1960ರ ಮೇ 20ರಂದು ಜನಿಸಿದ್ದರು. ಬೆಂಗಳೂರಿನ ಶ್ರೀಜಗದ್ಗುರು ರೇಣುಕಾ ಕಾನೂನು ಕಾಲೇಜಿನಿಂದ ಪದವಿ ಪಡೆದಿದ್ದರು. ಹೈಕೋರ್ಟ್ ವಕೀಲರಾಗಿ ವೃತ್ತಿ ಆರಂಭಿಸಿದ ಅವರು, ತೆರಿಗೆ, ಅಬಕಾರಿ, ಸಿವಿಲ್, ಸಾಂವಿಧಾನಿಕ, ಶಿಕ್ಷಣ, ಸೇವಾ ಮತ್ತು ಕಾರ್ಮಿಕ ಕಾನೂನಿನಲ್ಲಿ ಪರಿಣತರಾಗಿದ್ದರು. 1995ರಿಂದ 2000 ಮತ್ತು 2005ರಿಂದ 2014ರ ನಡುವೆ ಸರಕಾರಿ ವಕೀಲರಾಗಿದ್ದರು.
2015ರ ಜ.2ರಂದು ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. 2022 ಮೇ 19ರಂದು ನಿವೃತ್ತರಾಗಲಿದ್ದಾರೆ.





