86ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಸಾಹಿತಿ ದೊಡ್ಡ ರಂಗೇಗೌಡ ಆಯ್ಕೆ: ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಪ್ರಕಟ

ಮಹೇಶ್ ಜೋಶಿ
ಬೆಂಗಳೂರು, ಎ.25: ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಹಾವೇರಿಯಲ್ಲಿ ಸೆ.23 ರಿಂದ ಸೆ.25ರವರೆಗೆ ನಡೆಯಲಿದ್ದು, ಡಾ. ದೊಡ್ಡರಂಗೇಗೌಡ ಅವರು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಕಸಾಪದ ಅಧ್ಯಕ್ಷ ಮಹೇಶ್ ಜೋಶಿ ಅವರು ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಮಾಡಲಿದ್ದು, ಸುಮಾರು 5 ಲಕ್ಷ ಜನರು ಸೇರಲಿದ್ದಾರೆ. ಸಮ್ಮೇಳನಕ್ಕೆ 19 ಕಾರ್ಯಕಾರಿ ಸಮಿತಿಗಳನ್ನು ಮಾಡಲಾಗುವುದು. 86 ಮೌಲಿಕ ಕೃತಿಗಳನ್ನು ಮುದ್ರಿಸಲಾಗುವುದು. 30 ಕೃತಿಗಳು ಹಾವೇರಿ ಜಿಲ್ಲೆಯ ಬಗ್ಗೆ ಇರಲಿದೆ ಎಂದರು.
ಸಮಾನಾಂತರ ವೇದಿಕೆಗಳಲ್ಲಿ ಜನರು ಇಲ್ಲದೆ ಇರುವುದನ್ನು ಕಳೆದ ಸಮ್ಮೇಳನಗಳಲ್ಲಿ ಗಮನಿಸಲಾಗಿದೆ. ಇದರಿಂದ ಗೋಷ್ಠಿ ನಡೆಸಿದವರಿಗೆ ಬೇಸರ ಉಂಟಾಗಿದೆ. ಹಾಗಾಗಿ ಸಮಾತಾಂತರ ವೇದಿಕೆಗಳು ಇರುವುದಿಲ್ಲ. ಪ್ರಧಾನ ವೇದಿಕೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುವುದು. ಜರ್ಮನ್ ತಾಂತ್ರಿಕತೆಯ ಆಧುನಿಕ ಟೆಂಟ್ ಅಳವಡಿಸಲಾಗುವುದು ಎಂದ ಅವರು, ಮುಖ್ಯಮಂತ್ರಿಗಳೊಂದಿಗೆ ಸಾರ್ವಜನಿಕ ಚರ್ಚೆ ನಡೆಸಲಾಗುವುದು ಎಂದರು.
20 ಕೋಟಿ ಅನುದಾನ, ದುಂದುವೆಚ್ಚವಿಲ್ಲ
ಈ ಬಾರಿಯ ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ರೂ.ಗಳನ್ನು ಸರಕಾರ ಅನುದಾನ ನೀಡಿದೆ. ಸರಕಾರಿ ನೌಕರರು ಎಂದಿನಂತೆ ತಮ್ಮ ಒಂದು ದಿನದ ಸಂಬಳವನ್ನು ನೀಡಲಿದ್ದಾರೆ. ಪ್ರತಿನಿಧಿಗಳ ಶುಲ್ಕವನ್ನು 250 ರೂ.ಗಳಿಂದ 500 ರೂ.ಗಳಿಗೆ ಹೆಚ್ಚಿಸಲು ಮುಂದಿನ ಸಭೆಯಲ್ಲಿ ತೀರ್ಮಾನಿಸಲಾಗುವುದು. ಕೋವಿಡ್ ಕಾರಣದಿಂದ ಕಳೆದ ವರ್ಷ ಸಮ್ಮೇಳನ ನಡೆದಿಲ್ಲ. ಹಾಗಾಗಿ ಸರಕಾರವು ಕಸಾಪ ಮೇಲೆ ನಂಬಿಕೆ ಇರಿಸಿ, ಹಿಂದೆಂದಿಗಿಂತ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿದೆ. ಯಾವುದೇ ಕಾರಣಕ್ಕೂ ದುಂದು ವೆಚ್ಚ ಮಾಡುವುದಿಲ್ಲ.
-ಮಹೇಶ್ ಜೋಶಿ, ಕಸಾಪ ಅಧ್ಯಕ್ಷ
ಕಸಾಪ ಬೈಲಾ ತಿದ್ದುಪಡಿ ಕುರಿತು ಕಸಾಪ ಪ್ರಕಟಿಸಿರುವ ತ್ರೈಮಾಸಿಕದ ಅಕ್ಟೋಬರ್ 2021-ಮಾರ್ಚ್ 2022ರ ಕನ್ನಡ ನುಡಿ ಸಂಚಿಕೆಯಲ್ಲಿ ಪ್ರಕಟಿಸಿ, ಸದಸ್ಯರಿಗೆ ಅಂಚೆ ಮೂಲಕ ಕಳುಹಿಸಲಾಗಿದೆ. ಮೇ 1ರಂದು ಕಾಗಿನೆಲೆಯಲ್ಲಿ ಸರ್ವ ಸದಸ್ಯರ ವಿಶೇಷ ಸಭೆ ಹಾಗೂ ತಿದ್ದುಪಡಿ ಕುರಿತು ಸಭೆಯನ್ನು ಆಯೋಜಿಸಲಾಗಿದೆ. ಚುನಾವಣೆ ಕುರಿತು ಮಾಡಿರುವ ತಿದ್ದುಪಡಿಯನ್ನು 2025ರ ಕೊನೆಯಲ್ಲಿ ಬಹಿರಂಗಪಡಿಸಲಾಗುವುದು.
-ಮಹೇಶ್ ಜೋಶಿ, ಕಸಾಪ ಅಧ್ಯಕ್ಷ







