‘ಪ್ಯಾಕೇಜ್ ಪದ್ಧತಿ' ರದ್ದುಗೊಳಿಸಲು ಮುಖ್ಯಮಂತ್ರಿ ಬೊಮ್ಮಾಯಿಗೆ ಗುತ್ತಿಗೆದಾರರ ಸಂಘದ ಮನವಿ
ಬೇಡಿಕೆ ಈಡೇರಿಸದಿದ್ದರೆ ದಾಖಲೆ ಬಿಡುಗಡೆ: ಡಿ.ಕೆಂಪಣ್ಣ ಎಚ್ಚರಿಕೆ

ಸಿಎಂಗೆ ಗುತ್ತಿಗೆದಾರರ ಸಂಘದಿಂದ ಮನವಿ
ಬೆಂಗಳೂರು, ಎ. 25: ‘ಸರಕಾರಿ ಕಾಮಗಾರಿಗಳ ಗುತ್ತಿಗೆ ನೀಡುವ ಸಂದರ್ಭದಲ್ಲಿ ಅನುಸರಿಸುವ ಪ್ಯಾಕೇಜ್ ಪದ್ದತಿ ರದ್ದುಗೊಳಿಸಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಬಾಕಿ ಮೊತ್ತ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು' ಎಂದು ಆಗ್ರಹಿಸಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ.
ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಖುದ್ದು ಭೇಟಿ ಮಾಡಿದ ನಿಯೋಗ, ‘ಪ್ಯಾಕೇಜ್ ಪದ್ಧತಿಯನ್ನು ರದ್ದು ಮಾಡಬೇಕು. ಈ ವ್ಯವಸ್ಥೆಯಿಂದ ಟೆಂಡರ್ ಪಡೆದುಕೊಳ್ಳಲು ಸ್ಥಳೀಯ ಗುತ್ತಿಗೆದಾರರು ಹರಸಾಹಸ ಪಡುತ್ತಿದ್ದಾರೆ. ಪ್ರಸ್ತುತ 50 ಲಕ್ಷ ರೂ.ಟೆಂಡರ್ ವರೆಗೆ ಯಾವುದೇ ಯಂತ್ರೋಪಕರಣಗಳನ್ನು ಹೊಂದಬೇಕಿಲ್ಲ ಎಂಬ ಮಿತಿ ಇದೆ. ಈ ಮಿತಿಯನ್ನು 5 ಕೋಟಿ ರೂ.ಗೆ ಹೆಚ್ಚಳ ಮಾಡಬೇಕು' ಎಂದು ಆಗ್ರಹಿಸಲಾಗಿದೆ.
‘ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ, ಬಿಬಿಎಂಪಿ ಸೇರಿ ಇನ್ನಿತರ ಇಲಾಖೆಯಿಂದ 20 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆ ಆಗಬೇಕಿದೆ. ಜನಪ್ರತಿನಿಧಿಗಳು ಮಧ್ಯಪ್ರವೇಶಿಸಿ ಹಿರಿತನವನ್ನು ಉಲ್ಲಂಘನೆ ಮಾಡಿ ಹಣ ಬಿಡುಗಡೆಗೆ ಒತ್ತಡ ಹೇರುವ ಪರಿಪಾಠ ಹೆಚ್ಚಾಗಿದೆ. ಸರಕಾರ ಒತ್ತಡಕ್ಕೆ ಮಣಿಯದೆ ಹಿರಿತನದ ಆಧಾರದ ಮೇಲೆ ಬಾಕಿ ಮೊತ್ತ ಬಿಡುಗಡೆ ಮಾಡಬೇಕು' ಎಂದು ಕೋರಲಾಗಿದೆ.
‘ಟೆಂಡರ್ಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಶೇ.30ರಿಂದ ಶೇ.40ರಷ್ಟು ಕಮಿಷನ್ ಇದೆ. ಟೆಂಡರ್ ಅನುಮೋದನೆಗೂ ಮೊದಲು ಆರಂಭವಾಗುವ ಭ್ರಷ್ಟಾಚಾರ ಪ್ರಕ್ರಿಯೆ ಬಿಲ್ ಪಾವತಿ ಆಗುವವರೆಗೂ ಮುಂದುವರಿಯುತ್ತದೆ. ಈ ನಿಟ್ಟಿನಲ್ಲಿ 50 ಕೋಟಿ ರೂ.ಗೂ ಅಧಿಕ ವೆಚ್ಚದ ಕಾಮಗಾರಿಗಳ ಮೇಲೆ ನಿಗಾ ಇಡಲು ನ್ಯಾಯಮೂರ್ತಿ ಒಳಗೊಂಡ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗಿದ್ದು ಈ ಮಿತಿಯನ್ನು 5 ಕೋಟಿ ರೂ.ಗೆ ಇಳಿಸಬೇಕು' ಎಂದು ಮನವಿ ಮಾಡಲಾಗಿದೆ.
ಬೇಡಿಕೆ ಈಡೇರಿಸದಿದ್ದರೆ ದಾಖಲೆ ಬಿಡುಗಡೆ
ಪ್ಯಾಕೇಜ್ ಪದ್ಧತಿ ರದ್ದು, ಭ್ರಷ್ಟಾಚಾರ ನಿಯಂತ್ರಣಕ್ಕೆ ಸರಕಾರ ಎಲ್ಲ ರೀತಿಯ ಸಹಕಾರ ನೀಡುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಯನ್ನು ಅವರಿಗೆ ನೀಡಿಲ್ಲ. ನಮ್ಮ ಬೇಡಿಕೆ ಈಡೇರಿಸಬೇಕೆಂದು ಕೋರಿ ಮನವಿ ಮಾಡಿದ್ದೇವೆ. ಇಲ್ಲವಾದರೆ ದಾಖಲೆ ಬಿಡುಗಡೆ ಮಾಡಬೇಕಾಗುತ್ತದೆ.
-ಡಿ.ಕೆಂಪಣ್ಣ, ಗುತ್ತಿಗೆದಾರ ಸಂಘದ ಅಧ್ಯಕ್ಷ







