ತ್ರಾಸಿ: ಯಾಂತ್ರೀಕೃತ ಹೂಳೆತ್ತುವ ಕಾಮಗಾರಿ ವಿರೋಧಿಸಿ ಪ್ರತಿಭಟನೆ

ಕುಂದಾಪುರ, ಎ.25: ತ್ರಾಸಿ ಗ್ರಾಮದ ಸೌಪರ್ಣಿಕ ನದಿಯಲ್ಲಿ ನಡೆಯುತ್ತಿ ರುವ ಯಾಂತ್ರೀಕೃತ ಹೂಳೆತ್ತುವ ಕಾಮಗಾರಿ ವಿರೋಧಿಸಿ ಸ್ಥಳೀಯ ಗ್ರಾಮಸ್ಥರು ಸೋಮವಾರ ಮತ್ತೆ ಮೂರನೆ ಬಾರಿಗೆ ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೋರೇಶನ್ ಲಿಮಿಟೆಡ್ ಕಂಪೆನಿಯು ತ್ರಾಸಿ ಹಾಗೂ ಹೊಸಾಡು ಗ್ರಾಮದ ಸೌಪರ್ಣಿಕ ನದಿಯಲ್ಲಿ ಯಾಂತ್ರೀಕೃತ ಹೂಳೆತ್ತುವ ಕಾಮಗಾರಿ ನಡೆಸುತ್ತಿದೆ. ಇದರಿಂದ ನದಿ ಸುತ್ತಮುತ್ತಲಿನ ಗ್ರಾಮದ ನದಿ ದಂಡೆ ಕುಸಿತಕ್ಕೆ ಒಳಗಾಗುತ್ತಿದೆ. ಬಾವಿಯಲ್ಲಿ ಉಪ್ಪು ನೀರು ಬರಲಾರಂಭಿ ಸಿದ್ದು ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಯಾಂತ್ರೀಕೃತ ಹೂಳೆತ್ತುವ ಸ್ಥಳದ ಸಮೀಪದಲ್ಲಿರುವ ಡ್ಯಾಮ್ ಒಡೆದು ಹೋಗುವ ಸಾಧ್ಯತೆ ಇದ್ದು, ಮೀನುಗಾರಿಕೆಗೂ ತೊಂದರೆಯಾಗಲಿದೆ. ಪ್ರತಿನಿತ್ಯ ನೂರಾರು ಲಾರಿಗಳು ಅಗಲ ಕಿರಿದಾದ ರಸ್ತೆಯಲ್ಲಿ ಹಗಲಿರುಳೆನ್ನದೆ ಸಂಚರಿಸುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ ನಡೆಯುತ್ತಿರುವ ಯಾಂತ್ರೀಕೃತ ಹೂಳೆತ್ತುವ ಮರಳು ತೆಗೆಯುವ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸಾಂಪ್ರದಾಯಿಕ ಮರಳುಗಾರಿಕೆ ಅವಕಾಶ ನೀಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಯಾವುದೇ ಕಾರಣಕ್ಕೂ ಲಾರಿ ಸಂಚಾರಕ್ಕೆ ಬಿಡಲ್ಲ ಎಂದು ಲಾರಿಗೆ ಮಹಿಳೆಯರು ಅಡ್ಡಗಟ್ಟಿದರು. ಈ ವೇಳೆ ಗಂಗೊಳ್ಳಿ ಪೊಲೀಸ್ ಉಪ ನಿರೀಕ್ಷಕ ನಂಜಾ ನಾಯ್ಕ್ ಪ್ರತಿಭಟನಾಕಾರರ ಮನೊವೊಲಿಕೆ ಯತ್ನಿಸಿದರೂ ಕೂಡ ಯಾರೂ ಸ್ಪಂದಿಸದೆ ನ್ಯಾಯಕ್ಕಾಗಿ ಆಗ್ರಹ ಮಾಡಿದರು. ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಆಗಮಿಸಬೇಕೆಂದು ಸ್ಥಳೀಯರು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದ್ದಾರೆ.
ಬಳಿಕ ಸ್ಥಳಕ್ಕೆ ಆಗಮಿಸಿದ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಹೂಳೆತ್ತುವ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಸೂಚಿಸಿದರು. ಅದರಂತೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಯಿತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸ ಲಾಗಿತ್ತು.







