ಎಲಾನ್ ಮಸ್ಕ್ ಜೊತೆಗೆ ಮತ್ತೆ ಮಾತುಕತೆಗೆ ಮುಂದಾದ ಟ್ವಿಟ್ಟರ್ ಆಡಳಿತ

ನ್ಯೂಯಾರ್ಕ್: ತಾವು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮಾಲೀಕತ್ವ ಪಡೆಯಲು ಮಾಡಿರುವ 43 ಬಿಲಿಯನ್ ಡಾಲರ್ ಆಫರ್ ಕುರಿತಾದ ಮಾಹಿತಿಗಳನ್ನು ನೀಡುವ ಮೂಲಕ ಸಂಸ್ಥೆಯ ಹಲವಾರು ಷೇರುದಾರರನ್ನು ಓಲೈಸಲು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಮುಂದಾದ ಹಿನ್ನೆಲೆಯಲ್ಲಿ ಟ್ವಿಟ್ಟರ್ ಆಡಳಿತ ರವಿವಾರ ಅವರ ಜೊತೆಗೆ ಮಾತುಕತೆಗೆ ಮುಂದಾಗಿದೆ.
ಆದರೆ ಮಾತುಕತೆಗಳು ನಡೆಯುತ್ತಿವೆ ಎಂಬ ಮಾತ್ರಕ್ಕೆ ಇಲಾನ್ ಮಸ್ಕ್ ಅವರ ತಲಾ ಷೇರಿಗೆ 54.20 ಡಾಲರ್ ಬಿಡ್‍ಗೆ ಒಪ್ಪಲಾಗುವುದೆಂದೇನೂ ಇಲ್ಲ ಎಂದು ಟ್ವಿಟ್ಟರ್ ಹೇಳಿದೆ.
ತಮ್ಮ ಬಿಡ್‍ಗೆ ಬೆಂಬಲ ಸೂಚಿಸುವಂತೆ ಕೋರಿ ಎಲಾನ್ ಮಸ್ಕ್ ಅವರು ಕಳೆದ ಕೆಲ ದಿನಗಳಿಂದ ಟ್ವಿಟ್ಟರ್ ಷೇರುದಾರರನ್ನು ಭೇಟಿಯಾಗುತ್ತಿದ್ದಾರೆ. ವಾಕ್ ಸ್ವಾತಂತ್ರ್ಯದ ನೈಜ ವೇದಿಕೆಯಾಗಿ ಟ್ವಿಟ್ಟರ್ ಬೆಳೆಯಬೇಕಾದರೆ ಅದು ಖಾಸಗಿ ಸಂಸ್ಥೆಯಾಗಬೇಕು ಎಂಬುದು ಎಲಾನ್ ಮಸ್ಕ್ ಅವರ ವಾದವಾಗಿದೆ.
ಮಸ್ಕ್ ಅವರ ಯೋಜನೆ ಬಗ್ಗೆ ತಿಳಿದುಕೊಂಡ ನಂತರ ಹಲವಾರು ಟ್ವಿಟ್ಟರ್ ಷೇರುದಾರರು ಅವರನ್ನು ಭೇಟಿಯಾಗಿದ್ದಾರೆನ್ನಲಾಗಿದೆ. ಆದರೆ ತಮ್ಮ ಬಿಡ್ ಅಂತಿಮ ಹಾಗೂ ಅತ್ಯುತ್ತಮ ಎಂದು ಮಸ್ಕ್ ಹೇಳುತ್ತಿರುವುದು ಮಾತುಕತೆಗಳಿಗೆ ಅಡ್ಡಿಯಾಗಿದೆ ಎನ್ನಲಾಗಿದೆ, ಆದರೂ ಮಸ್ಕ್ ಅವರಿಂದ ಅವರ ಆಫರ್ ಬಗ್ಗೆ ಟ್ವಿಟ್ಟರ್ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮುಂದಾಗಿದೆ.





