ಅಕ್ರಮ ಆಸ್ತಿ ಗಳಿಕೆ ಆರೋಪ: ಪ್ರಕರಣ ರದ್ದು ಕೋರಿದ್ದ ವಾರ್ಡನ್ ಅರ್ಜಿ ವಜಾ

ಬೆಂಗಳೂರು, ಎ.25: ಕನಕಪುರ ತಾಲೂಕಿನ ಹುಣಸನಹಳ್ಳಿ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕಿರಿಯ ವಾರ್ಡನ್ ಬಿ.ನಟರಾಜ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ರಾಮನಗರ ಜಿಲ್ಲೆಯ 2ನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಕೋರಿ ಬಿ.ನಟರಾಜ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಅದೇಶ ಮಾಡಿದೆ.
ಹಾಸ್ಟೆಲ್ ಕಿರಿಯ ವಾರ್ಡನ್ ಬಿ.ನಟರಾಜ ವಿರುದ್ಧ ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್ ದಾಖಲಿಸಿದ್ದ ಖಾಸಗಿ ದೂರಿನ ಮೇರೆಗೆ ರಾಮನಗರ ಜಿಲ್ಲೆಯ 2ನೆ ಹೆಚ್ಚುವರಿ ನ್ಯಾಯಾಲಯ ಭ್ರಷ್ಟಾಚಾರ ನಿಗ್ರಹ ಕಾಯ್ದೆ(ತಿದ್ದುಪಡಿ)-2018ರ ಅನುಸಾರ ದೂರಿನ ತನಿಖೆಗೆ ಅನುಮತಿ ನೀಡಿದೆ. ಈ ದೂರು ರದ್ದು ಕೋರಿ ನಟರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇತ್ತೀಚೆಗೆ ಪ್ರಕರಣ ಹಿಂಪಡೆಯಲು ಕೋರಿ ಅರ್ಜಿ ಸಲ್ಲಿಸಿದ್ದರು. ಅದರಂತೆ ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ.
ಅರ್ಜಿದಾರರ ಆರೋಪ: ಕಂಚನಹಳ್ಳಿ ರವಿಕುಮಾರ್ 2018ರಲ್ಲಿ ಕಿರಿಯ ವಾರ್ಡನ್ ಆಗಿರುವ ಬಿ.ನಟರಾಜ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಕ್ರಮ ಜರುಗಿಸುವಂತೆ ಕೋರಿ ರಾಮನಗರ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ದೂರಿನಲ್ಲಿ, ನಟರಾಜ ಅವರ ನಿಗದಿತ ಆದಾಯಕ್ಕಿಂತಲೂ ಹೆಚ್ಚಿನ ಸ್ಥಿರ ಮತ್ತು ಚರಾಸ್ತಿಯನ್ನು ಅಕ್ರಮವಾಗಿ ಸಂಪಾದನೆ ಮಾಡಿದ್ದಾರೆ, ಸುಮಾರು 250 ಕೋಟಿ ರೂಪಾಯಿ ಆಸ್ತಿಯನ್ನು ಬೇನಾಮಿ ವೃಕ್ತಿಗಳ ಹೆಸರಿನಲ್ಲಿ ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಲಯ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶಿಸಿತ್ತು. ಅದರಂತೆ ರಾಮನಗರ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ನಟರಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.







