ಆಶಿಷ್ ಮಿಶ್ರಾ ಜಾಮೀನು ರದ್ದು: ಉ.ಪ್ರದೇಶ ರೈತರ ಕುಟುಂಬಗಳಿಂದ ಸುಪ್ರಿಂ ಕೋರ್ಟ್ಗೆ ಶ್ಲಾಘನೆ

PHOTO COURTESY: TWITTER
ಬಹರೈಚ್(ಉ.ಪ್ರ), ಎ.25: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ ಮಿಶ್ರಾರ ಪುತ್ರ ಆಶಿಷ್ ಮಿಶ್ರಾಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸಿದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶಂಸಿರುವ ಮೃತ ರೈತರ ಕುಟುಂಬಗಳು, ನ್ಯಾಯಾಂಗದಲ್ಲಿ ತಮ್ಮ ನಂಬಿಕೆ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಅಲಹಾಬಾದ್ ಉಚ್ಚ ನ್ಯಾಯಾಲಯವು ಆಶಿಷ್ ಮಿಶ್ರಾಗೆ ನೀಡಿದ್ದ ಜಾಮೀನನ್ನು ಎ.18ರಂದು ರದ್ದುಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು ಒಂದು ವಾರದೊಳಗೆ ಶರಣಾಗುವಂತೆ ಸೂಚಿಸಿತ್ತು. ರವಿವಾರ ಲಖಿಂಪುರದ ಸ್ಥಳೀಯ ನ್ಯಾಯಾಲಯಕ್ಕೆ ಶರಣಾಗಿದ್ದ ಆಶಿಷ್ ಮಿಶ್ರಾನನ್ನು ವಾಪಸ್ ಜೈಲಿಗೆ ಕಳುಹಿಸಲಾಗಿದೆ.
ನ್ಯಾಯಾಲಯದ ಆದೇಶವನ್ನು ಕೇಳಿದ ಬಳಿಕ ಈ ದೇಶದಲ್ಲಿ ನ್ಯಾಯದ ಆಡಳಿತವಿದೆ, ಗೂಂಡಾಗಳದ್ದಲ್ಲ ಎಂಬ ಭಾವನೆ ತನ್ನಲ್ಲಿ ಮೂಡಿದೆ ಎಂದು ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತ ಮೊಹರ್ನಿಯಾದ ರೈತ ಗುರ್ವಿಂದರ್ ಸಿಂಗ್ ತಂದೆ ಸುಖ್ವಿಂದರ್ ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ‘ನ್ಯಾಯಾಲಯದ ತೀರ್ಪಿನಿಂದ ದೇವರಲ್ಲಿ ಮತ್ತು ನ್ಯಾಯಾಂಗದಲ್ಲಿ ನಮ್ಮ ನಂಬಿಕೆ ಹೆಚ್ಚಿದೆ’ ಎಂದರು.
‘ಸಚಿವರ ಪುತ್ರನ ಬಿಡುಗಡೆ ಮತ್ತು ಆತ ಮುಕ್ತವಾಗಿ ಓಡಾಡುತ್ತಿದ್ದುದು ರೈತರಿಗೆ ಕಪಾಳಮೋಕ್ಷದಂತಿತ್ತು. ಸರ್ವಾಧಿಕಾರಿಗಳ ಸರಕಾರದಲ್ಲಿ ಸರ್ವೋಚ್ಚ ನ್ಯಾಯಾಲಯವು ದೇಶದಲ್ಲಿ ಕಾನೂನು ಅಸ್ತಿತ್ವದಲ್ಲಿದೆ ಎಂಬ ಭಾವನೆಯನ್ನು ನಮ್ಮಲ್ಲಿ ಮೂಡಿಸಿದೆ. ನ್ಯಾಯಾಲಯದ ನಿರ್ಧಾರ ನಮಗೆ ತೃಪ್ತಿಯನ್ನು ನೀಡಿದೆ’ ಎಂದು ಸುಖ್ವಿಂದರ್ ಹಿರಿಯ ಸೋದರ ಸುಖದೇವ್ ಸಿಂಗ್ ಹೇಳಿದರು.
ಕಳೆದ ವರ್ಷದ ಅ.3ರಂದು ಲಖಿಂಪುರ ಖೇರಿಗೆ ಉ.ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಅವರ ಭೇಟಿಯ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಸಂಭವಿಸಿದ್ದ ಹಿಂಸಾಚಾರದಲ್ಲಿ ಎಂಟು ಜನರು ಮೃತಪಟ್ಟಿದ್ದು, ಈ ಪೈಕಿ ನಾಲ್ವರು ರೈತರು ಮತ್ತು ಓರ್ವ ಪತ್ರಕರ್ತ ಬಿಜೆಪಿ ಕಾರ್ಯಕರ್ತರ ಕಾರುಗಳಡಿ ಸಿಲುಕಿ ಸಾವನ್ನಪ್ಪಿದ್ದರು. ಒಂದು ಕಾರಿನಲ್ಲಿ ಆಶಿಷ್ ಮಿಶ್ರಾ ಇದ್ದ ಎಂದು ಪ್ರಕರಣದಲ್ಲಿ ಸಲ್ಲಿಸಲಾಗಿರುವ ದೂರಿನಲ್ಲಿ ಆರೋಪಿಸಲಾಗಿತ್ತು.







