ದಿಲ್ಲಿಯ ಶಿಕ್ಷಣ ಮಾದರಿ ಪಂಜಾಬಿನಲ್ಲಿ ಪುನರಾವರ್ತನೆ: ಭಗವಂತ ಮಾನ್ ಭರವಸೆ

ಹೊಸದಿಲ್ಲಿ, ಎ.25: ಪಂಜಾಬ್ ಸರಕಾರವು ದಿಲ್ಲಿಯ ಶಿಕ್ಷಣ ಮಾದರಿಯನ್ನು ರಾಜ್ಯದಲ್ಲಿ ಪುನರಾವರ್ತಿಸಲಿದೆ ಮತ್ತು ಎಲ್ಲ ಆರ್ಥಿಕ ಹಿನ್ನೆಲೆಗಳ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ಭಗವಂತ ಮಾನ್ ಅವರು ಸೋಮವಾರ ಇಲ್ಲಿ ತಿಳಿಸಿದರು.
ತನ್ನ ಹಿರಿಯ ಅಧಿಕಾರಿಗಳೊಂದಿಗೆ ಎರಡು ದಿನಗಳ ದಿಲ್ಲಿ ಪ್ರವಾಸದಲ್ಲಿರುವ ಮಾನ್ ‘ದಿಲ್ಲಿ ಮಾದರಿ’ಯನ್ನು ಅರಿತುಕೊಳ್ಳಲು ಮತ್ತು ಅದನ್ನು ತನ್ನ ರಾಜ್ಯದಲ್ಲಿ ಪುನರಾವರ್ತಿಸಲು ಇಲ್ಲಿಯ ಆರೋಗ್ಯ ಸಂಸ್ಥೆಗಳು ಮತ್ತು ಶಾಲೆಗಳಿಗೆ ಭೇಟಿ ನೀಡಿದರು.
ಚಿರಾಗ್ ಎನ್ಕ್ಲೇವ್ ನಲ್ಲಿರುವ ಸರಕಾರಿ ಶಾಲೆಗೆ ಭೇಟಿ ಸಂದರ್ಭದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಷ ಸಿಸೋಡಿಯಾ ಅವರು ಮಾನ್ ಜೊತೆಯಲ್ಲಿದ್ದರು.
‘ದಿಲ್ಲಿಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿನ ಕ್ರಾಂತಿಯು ದೇಶಾದ್ಯಂತ ಚರ್ಚಿಸಲ್ಪಟ್ಟಿದೆ. ನಾವು ಇದೇ ಮಾದರಿಯನ್ನು ಪಂಜಾಬಿನಲ್ಲಿ ಪುನರಾವರ್ತಿಸಲಿದ್ದು, ಶ್ರೀಮಂತ ಮತ್ತು ಬಡವರ್ಗಗಳ ವಿದ್ಯಾರ್ಥಿಗಳು ಒಟ್ಟಿಗೆ ಗುಣಮಟ್ಟದ ಶಿಕ್ಷಣವನ್ನು ಪಡೆಯಲಿದ್ದಾರೆ. ಈ ರೀತಿ ಪರಸ್ಪರರಿಂದ ಕಲಿತುಕೊಳ್ಳುವ ಮೂಲಕ ದೇಶವು ಪ್ರಗತಿಯನ್ನು ಸಾಧಿಸುತ್ತದೆ ’ಎಂದು ಮಾನ್ ಹೇಳಿದರು.
ದೇಶದ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸಲು ಎಲ್ಲರೂ ಒಂದಾಗಿ ಶ್ರಮಿಸೋಣ ಎಂದು ಕೇಜ್ರಿವಾಲ್ ತಿಳಿಸಿದರು.
ಪ್ರಮುಖವಾಗಿರುವ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಹಿರಿಯ ಅಧಿಕಾರಿಗಳ ದಂಡನ್ನೇ ಮಾನ್ ತನ್ನೊಂದಿಗೆ ಕರೆತಂದಿದ್ದಾರೆ.







