ಹೆಪಟೈಟಿಸ್ ನ ನಿಗೂಢ ತಳಿ ಪತ್ತೆ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

PTI
ನ್ಯೂಯಾರ್ಕ್, ಎ.25: ಯಕೃತ್ತಿನ ಉರಿಯೂತಕ್ಕೆ ಕಾರಣವಾಗುವ ತೀವ್ರ ಹೆಪಟೈಟಿಸ್ನ ನಿಗೂಢ ತಳಿ 11 ದೇಶದಲ್ಲಿ ಪತ್ತೆಯಾಗಿದ್ದು ಒಂದು ಮಗು ಮೃತಪಟ್ಟಿದೆ. ಒಂದು ತಿಂಗಳ ಶಿಶುವಿನಿಂದ 16 ವರ್ಷದವರೆಗಿನವರು ಈ ನಿಗೂಢ ಸೋಂಕಿಗೆ ಒಳಗಾಗುತ್ತಿದ್ದು ಇದುವರೆಗೆ 169 ಪ್ರಕರಣ ಪತ್ತೆಯಾಗಿದೆ. ಬ್ರಿಟನ್ ತಿಂಗಳಿನಲ್ಲಿ ಜನವರಿ ಬಳಿಕ 116 ಪ್ರಕರಣ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಅಮೆರಿಕ, ಇಸ್ರೇಲ್, ಡೆನ್ಮಾರ್ಕ್, ಐರ್ಯ್ಲಾಂಡ್, ನೆದರ್ಲ್ಯಾಂಡ್ ಮತ್ತು ಸ್ಪೇನ್ ದೇಶದಲ್ಲೂ ಈ ನಿಗೂಢ ವೈರಸ್ ಪತ್ತೆಯಾಗಿದೆ. ತೀಕ್ಷ್ಣ ಮತ್ತು ತೀವ್ರವಾದ ಹೆಪಟಿಟಿಸ್ ರೋಗದಿಂದ ಒಂದು ಮಗು ಸಾವನ್ನಪ್ಪಿದೆ. ಇತರ 17 ಮಕ್ಕಳಿಗೆ ಯಕೃತ್(ಲಿವರ್) ಕಸಿ ನಡೆಸುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಎಳೆಯ ಮಕ್ಕಳಲ್ಲಿ ಸೌಮ್ಯ ಹೆಪಟಿಟಿಸ್ ಅಪರೂಪವಲ್ಲ. ಆದರೆ ಆರೋಗ್ಯವಂತ ಮಕ್ಕಳಲ್ಲಿ ತೀವ್ರ ಮತ್ತು ತೀಕ್ಷ್ಣ ಹೆಪಟಿಟಿಸ್ ಲಕ್ಷಣ ಕಂಡುಬರುವುದು ಅಪರೂಪ. ಪತ್ತೆಯಾದ ಪ್ರಕರಣಗಳಲ್ಲಿ ರೋಗಕ್ಕೆ ಕಾರಣವಾದ ಅಂಶಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಕಿಬ್ಬೊಟ್ಟೆಯ ನೋವು, ಅತಿಸಾರ, ಯಕೃತ್ತಿನಲ್ಲಿ ಕಿಣ್ವದ ಮಟ್ಟ ಹೆಚ್ಚುವುದು , ಜಾಂಡಿಸ್ ಮುಂತಾದ ರೋಗಲಕ್ಷಣ ಕಂಡುಬಂದಿದೆ. ಇತರ ಕೆಲವು ಮಕ್ಕಳಲ್ಲಿ ಕಪ್ಪು ಬಣ್ಣದ ಮೂತ್ರ, ಅನಾರೋಗ್ಯ, ಆಯಾಸ, ಜ್ವರ, ಹಸಿವಿನ ಕೊರತೆ, ತಿಳಿಬಣ್ಣದ ಮಲ ಮತ್ತು ಕೀಲುನೋವಿನ ಲಕ್ಷಣ ಕಂಡುಬಂದಿದೆ.
ಪತ್ತೆಯಾದ ಪ್ರಕರಣ ಈಗ ಅತ್ಯಲ್ಪವಾಗಿದ್ದರೂ ಮಕ್ಕಳಿಗೆ ಸಂಬಂಧಿಸಿದ್ದರಿಂದ ಮತ್ತು ಅದರ ತೀವ್ರತೆ ಆತಂಕಕ್ಕೆ ಕಾರಣವಾಗಿದೆ ಎಂದು ಯುರೋಪಿಯನ್ ಅಸೋಸಿಯೇಷನ್ ಆಫ್ ದಿ ಸ್ಟಡಿ ಆಫ್ ದಿ ಲಿವರ್ಸ್ ಪಬ್ಲಿಕ್ ಹೆಲ್ತ್ ಕಮಿಟಿಯ ಅಧ್ಯಕ್ಷೆ ಮಾರಿಯಾ ಬುತಿ ಹೇಳಿದ್ದಾರೆ. ಈ ರೋಗಕ್ಕೆ ಕಾರಣವಾಗುವ ಅಂಶಗಳನ್ನು ಕಂಡುಹಿಡಿಯುವಂತೆ ಅಮೆರಿಕ ಮತ್ತು ಬ್ರಿಟನ್ನ ಆರೋಗ್ಯ ಇಲಾಖೆ ಸೂಚಿಸಿದೆ.





