ಸಿ.ಟಿ.ರವಿ ವಿರುದ್ಧ ಬೇನಾಮಿ ಆಸ್ತಿ ಆರೋಪ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗೆ ಲೀಗಲ್ ನೋಟಿಸ್

ಎಂ.ಲಕ್ಷ್ಮಣ್ | ಸಿ.ಟಿ.ರವಿ
ಮೈಸೂರು: ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಬೇನಾಮಿ ಹೆಸರಿನಲ್ಲಿ ಸುಮಾರು 400-500 ಎಕರೆ ಆಸ್ತಿ ಮಾಡಿದ್ದು ಇವರು 'ಲೂಟಿ' ರವಿ ಎಂದು ಆರೋಪ ಮಾಡಿದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರಿಗೆ ಶಾಸಕ ಸಿ.ಟಿ.ರವಿ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ತಮ್ಮ ವಕೀಲರ ಮೂಲಕ ಈ ನೋಟಿಸ್ ಜಾರಿ ಮಾಡಿದ್ದು, ನೋಟಿಸ್ ತಲುಪಿದ 48 ಗಂಟೆಯೊಳಗೆ ಕ್ಷಮೆ ಕೇಳಿ ನನ್ನ ಮೇಲೆ ಹೊರಿಸಲಾಗಿರುವ ಆರೋಪಗಳನ್ನು ಹಿಂಪಡೆಯಬೇಕು ಇಲ್ಲದಿದ್ದರೆ ಮಾನನಷ್ಟ ಮೊಕದ್ದಮ್ಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನನ್ನ ಮೇಲೆ ಎಪ್ರಿಲ್ 20 ರಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಕಳೆದ ಹತ್ತು ವರ್ಷಗಳ ಹಿಂದೆ ಸಿ.ಟಿ.ರವಿ ಅವರ ಆಸ್ತಿ 19ಎಕರೆ 3 ಇತ್ತು ಈಗ ಬೆಂಗಳೂರು, ಚಿಕ್ಕಮಗಳೂರು, ಹಾಸನ, ದೆಹಲಿ ಸೇರಿದಂತೆ ಇತರೆಡೆ 400-500ಎಕರೆ ಆಸ್ತಿ ಸಂಪಾದನೆ ಮಾಡಿದ್ದೀರಿ, ಜೊತೆಗೆ ಇವರ ಭಾವ ಸುದರ್ಶನ್ ಅವರಿಗೆ ಚಿಕ್ಕಮಗಳೂರಿನ ಎಲ್ಲಾ ಗುತ್ತಿಗೆಯನ್ನು ನೀಡಲಾಗಿದೆ. ಮೆಡಿಕಲ್ ಕಾಲೇಜಿನ 360 ಕೋಟಿ ಗುತ್ತಿಗೆಯನ್ನು ನೀಡಲಾಗಿದೆ ಎಂದು ಹೇಳುವ ಮೂಲಕ ಹಲವಾರು ಸುಳ್ಳು ಆರೋಪಗಳನ್ನು ಮಾಡಿದ್ದೀರಿ. ಇದನ್ನು ಸಾಭೀತು ಪಡಿಸಬೇಕು ಇಲ್ಲದಿದ್ದರೆ ನಿಮ್ಮ ಮೇಲೆ ಮಾನನಷ್ಟ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ನೋಟಿಸ್ ನಲ್ಲಿ ತಿಳಿಸಿದ್ದಾರೆ.







