ವಿಟ್ಲ: ಮದುವೆ ಪ್ರಯುಕ್ತ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ ಚಂದ್ರಶೇಖರ
ನವ ದಂಪತಿಗೆ ಶುಭ ಹಾರೈಸಿದ ಬೈರಿಕಟ್ಟೆಯ ಮುಸ್ಲಿಮರು

ಬಂಟ್ವಾಳ, ಎ.26: ಪ್ರಸಕ್ತ ಸಮಾಜದಲ್ಲಿ ಹಿಜಾಬ್, ಹಲಾಲ್, ಜಟ್ಕಾ ಕಟ್, ಅಝಾನ್, ವ್ಯಾಪಾರ ಬಹಿಷ್ಕಾರ ಇತ್ಯಾದಿಯಾಗಿ ಜಾತಿ - ಧರ್ಮಗಳ ಮಧ್ಯೆ ದ್ವೇಷ ಹುಟ್ಟಿಸುವ ಕೃತ್ಯಗಳು ನಡೆಯುತ್ತಿರುವುದರ ನಡುವೆಯೇ ವಿಟ್ಲ ಸಮೀಪದ ಬೈರಿಕಟ್ಟೆಯಲ್ಲಿ ಚಂದ್ರಶೇಖರ ಜೆಡ್ಡು ಎಂಬವರು ತನ್ನ ವಿವಾಹದ ಪ್ರಯುಕ್ತ ಮುಸ್ಲಿಮರಿಗೆ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿ ಆದರ್ಶ ಮೆರೆದಿದ್ದಾರೆ.
ಬೈರಿಕಟ್ಟೆಯ ಗೆಳೆಯರ ಬಳಗ ಸದಸ್ಯರಾಗಿರುವ ಚಂದ್ರಶೇಖರ ಜೆಡ್ಡು ಅವರ ವಿವಾಹ ಎ.24ರಂದು ನೆರವೇರಿದೆ. ಆದರೆ ಮದುವೆಗೆ ಆಗಮಿಸಿದ ಮುಸ್ಲಿಮ್ ಗೆಳೆಯರಿಗೆ ರಮಝಾನ್ ಕಾರಣ ಔತಣ ಸ್ವೀಕರಿಸಲು ಸಾಧ್ಯವಾಗದಿರುವುದು ಮದುಮಗ ಚಂದ್ರಶೇಖರರಿಗೆ ಬೇಸರವನ್ನುಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಚಂದ್ರಶೇಖರ್ ತನ್ನ ಊರಿನ ಎಲ್ಲಾ ಮುಸ್ಲಿಮರಿಗೆ ಮದುವೆ ಪ್ರಯುಕ್ತ ಬೈರಿಕಟ್ಟೆ ಜುಮಾ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದರು.
ಇಫ್ತಾರ್ ಕೂಟವನ್ನು ಏರ್ಪಡಿಸಿದ ನವ ವಿವಾಹಿತ ಚಂದ್ರಶೇಖರ್ ಅವರನ್ನು ಜಲಾಲಿಯಾ ಜುಮಾ ಮಸೀದಿ ಮತ್ತು ಮವೂನತುಲ್ ಇಸ್ಲಾಮ್ ಯುವಜನ ಕಮಿಟಿಯ ಅಧ್ಯಕ್ಷ, ಪದಾಧಿಕಾರಿಗಳು, ಮಸೀದಿಯ ಧರ್ಮಗುರುಗಳ ಮುಖಾಂತರ ಸನ್ಮಾನಿಸಿ ಹರಸಿದರು.
ಸೌಹಾರ್ದ ಇಫ್ತಾರ್ ಕೂಟಕ್ಕೆ ಆಗಮಿಸಿದ ಎಲ್ಲರೂ ನವ ದಂಪತಿಗೆ ಶುಭ ಹಾರೈಸಿದರು.
