ಸಿದ್ದರಾಮಯ್ಯ ಸರಕಾರದ ವೈಫಲ್ಯವೇ ಇದೀಗ ಗಲಭೆಗಳಿಗೆ ಕಾರಣ: ನಳಿನ್ ಕುಮಾರ್ ಕಟೀಲು

ಹುಬ್ಬಳ್ಳಿ, ಎ.26: ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವೈಫಲ್ಯಗಳಿಂದಾಗಿ ಇದೀಗ ರಾಜ್ಯದಲ್ಲಿ ಗಲಭೆಗಳು ನಡೆಯುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲು ಆರೋಪಿಸಿದ್ದಾರೆ.
ಇತ್ತೀಚೆಗೆ ಹಿಂಸಾಚಾರ ನಡೆದ ಹಳೇಹುಬ್ಬಳ್ಳಿ ಪ್ರದೇಶಕ್ಕೆ ಮಂಗಳವಾರ ಬೆಳಗ್ಗೆ ಭೇಟಿ ನೀಡಿದ ನಳಿನ್ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಹಲವು ಹಿಂದುತ್ವ ಕಾರ್ಯಕರ್ತರ ಹತ್ಯೆ ನಡೆಯಿತು. ಟಿಪ್ಪು ಜಯಂತಿ ಹೆಸರಲ್ಲಿ ರಾಜ್ಯಾದ್ಯಂತ ಗಲಭೆಗಳು ನಡೆದವು. ಮೈಸೂರು ಹಾಗೂ ಮಂಗಳೂರು ಕಾರಾಗೃಹದಲ್ಲಿ ಕೈದಿಗಳ ಹತ್ಯೆ ನಡೆಯಿತು. ಈ ವೇಳೆ ಇವುಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಇದೀಗ ಇಂತಹ ಗಲಭೆಗಳು ನಡೆಯುತ್ತಿರಲಿಲ್ಲ ಎಂದು ಹೇಳಿದರು.
ಇತ್ತೀಚೆಗೆ ರಾಜ್ಯದಲ್ಲಿ ನಡೆದ ಗಲಭೆಗಳನ್ನು ಬಿಜೆಪಿ ಸರಕಾರ ಸಮರ್ಥವಾಗಿ ನಿಯಂತ್ರಿಸಿದೆ, ಕೋಮು ಗಲಭೆಯನ್ನು ಹತ್ತಿಕ್ಕಿದೆ. ಆದರೆ ಈಗಲೂ ಸಿದ್ದರಾಮಯ್ಯರ ಆಡಳಿತವೇ ಇದ್ದಿದ್ದರೆ ಬಂಧನಕ್ಕೊಳಗಾದ ಆರೋಪಿಗಳೆಲ್ಲ ನಿರಾತಂಕವಾಗಿ ಹೊರ ಬರುತ್ತಿದ್ದರು. ಅವರ ರಕ್ಷಣೆಯನ್ನು ಕೂಡಾ ಸಿದ್ದರಾಮಯ್ಯ ಅವರೇ ಮಾಡುತ್ತಿದ್ದರು ಎಂದು ನಳಿನ್ ಆರೋಪಿಸಿದರು.





