ರಾ.ಜೂನಿಯರ್ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಪ್ರಥಮ

ಮಂಗಳೂರು, ಎ.26: ಕೇರಳದ ಅಲಪ್ಪುಝದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಜೂನಿಯರ್ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್‌ನ ಮೂರನೇ ವರ್ಷದ ವಿದ್ಯಾರ್ಥಿ ಆರೆನ್ ಜಾಯ್ ಫೆರ್ನಾಂಡಿಸ್ ಪ್ರಥಮ ಸ್ಥಾನ ಗಳಿಸಿದ್ದಾರೆ.
ಆರೆನ್ ಸ್ಕ್ವಾಟ್ 230 ಕೆಜಿ ಮತ್ತು ಡೆಡ್ ಲಿಫ್ಟ್ 283 ಕೆಜಿ ಸೇರಿ ಒಟ್ಟು 653 ಕೆಜಿ ತೂಕವನ್ನು ಎತ್ತುವ ಮೂಲಕ ಮೂರು ರಾಷ್ಟ್ರೀಯ ದಾಖಲೆಗಳನ್ನು ಬರೆದಿದ್ದಾರೆ. ಜೊತೆಗೆ ಈ ಸ್ಪರ್ಧಾಕೂಟದಲ್ಲಿ 140 ಕೆಜಿ ಬೆಂಚ್ ಪ್ರೆಸ್ ಅನ್ನು ಸಹ ಎತ್ತಿದ್ದಾರೆ.
ಜೂಡ್ ಡೇವಿಡ್ ಫೆರ್ನಾಂಡಿಸ್ ಮತ್ತು ಆನಂದಿ ಡಯಾನಾ ಫೆರ್ನಾಂಡಿಸ್ ದಂಪತಿಯ ಪುತ್ರರಾಗಿರುವ ಆರೆನ್ ಇದುವರೆಗೆ ವಿವಿಧ ರಾಜ್ಯ, ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್‌ಗಳಲ್ಲಿ 6 ಚಿನ್ನ, 3 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.
2019ರಲ್ಲಿ, ಕಝಕಿಸ್ತಾನ್‌ನಲ್ಲಿ ನಡೆದ ಏಷ್ಯನ್ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಆರೆನ್ ಚಿನ್ನದ ಪದಕ ಗೆದ್ದಿದ್ದರು. ಹಾಗೆಯೇ 2021ರಲ್ಲಿ ಅವರು ಭಾರತವನ್ನು ಪ್ರತಿನಿಧಿಸಿ ಸ್ವೀಡನ್‌ನ ಹಾಲ್ಮ್‌ಸ್ಟಾಡ್‌ನಲ್ಲಿ ನಡೆದ ವಿಶ್ವ ಜೂನಿಯರ್ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 6ನೇ ಸ್ಥಾನ ಗಳಿಸಿದ್ದರು ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.










