ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಧಾರಣೆ, ಸುರಕ್ಷಿತ ಅಂತರ ಪಾಲನೆ ಮಾಡಬೇಕು : ಡಿಸಿ ಕೂರ್ಮಾರಾವ್

ಕುಂದಾಪುರ : ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ, ಸುರಕ್ಷಿತ ಅಂತರ ಪಾಲನೆ ಮಾಡಬೇಕೆಂದು ಸರಕಾರ ಸೋಮವಾರ ಹೊಸ ನಿರ್ದೇಶನ ನೀಡಿದ್ದು ಅದರಂತೆ ಎಲ್ಲರೂ ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.
ಕುಂದಾಪುರ ತಾಲೂಕು ಪಂಚಾಯತ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊಸ ನಿರ್ದೇಶನದ ಹಿನ್ನೆಲೆ ಸ್ಥಳೀಯಾಡಳಿತ ತಂಡದ ಜೊತೆಗೆ ಈ ಆದೇಶ ಪಾಲನೆಯಲ್ಲಿ ತೊಡಗಿಸಿಕೊಳ್ಳಲಿದೆ. ಸಾರ್ವ ಜನಿಕರು ಸ್ವಯಂಪ್ರೇರಿತವಾಗಿ ಇದನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣ ಉತ್ತಮವಾಗಿ ನಡೆದಿದೆ. ಮೊದಲನೇ ಡೋಸ್ ಪಡೆದವರು ನೂರಕ್ಕೆ ನೂರು ಪ್ರತಿಶತವಾಗಿದ್ದು, ಶೇ. 98.5 ಜನರು ಎರಡನೇ ಡೋಸ್ ಪಡೆದಿದ್ದಾರೆ. ಉಳಿದವರು ಕೂಡ ಲಸಿಕೆ ಪಡೆಯಬೇಕು ಹಾಗೂ ಅರ್ಹರು ಮುನ್ನೆಚ್ಚರಿಕಾ ಡೋಸ್ ಕೂಡ ಪಡೆಯಲು ಪ್ರಚಾರ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಜೊತೆ ವಿಡಿಯೋ ಕಾನ್ಪರೆನ್ಸ್ ನಡೆಸಿ ಲಸಿಕೆ ಲಭ್ಯತೆಯ ಬಗ್ಗೆ ಗಮನಹರಿಸಲು ಸೂಚನೆ ನೀಡಲಾಗಿದೆ. ಕೋವಿಡ್ ವಿರುದ್ಧ ಹೋರಾಟಕ್ಕೆ ವ್ಯಾಕ್ಸಿನ್ ಅತ್ಯಗತ್ಯವಾಗಿದೆ ಎಂದವರು ತಿಳಿಸಿದರು. ಇನ್ನು ಕೊರೋನ ಲಕ್ಷಣಗಳಿದ್ದವರು ಪರೀಕ್ಷೆ ಮಾಡಿಸಿಕೊಂಡು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳು, ಐಸೋಲೇಶನ್ ಮೊದಲಾದ ಪ್ರಕ್ರಿಯೆಗಳಿಗೆ ಒಳಪಡಬೇಕು. ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಆರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆಯಬಹುದು ಹಾಗೂ ಹರಡುವಿಕೆ ತಡೆಯಬಹುದು ಎಂದರು.
ಈ ಸಂದರ್ಭದಲ್ಲಿ ಉಡುಪಿ ಅಪರ ಜಿಲ್ಲಾಧಿಕಾರಿ ವೀಣಾ, ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ತಹಶಿಲ್ದಾರ್ ಕಿರಣ್ ಗೌರಯ್ಯ ಮೊದಲಾದ ವರು ಉಪಸ್ಥಿತರಿದ್ದರು.