ಹಾಲಿನ ದರ ಕನಿಷ್ಠ 3 ರೂ. ಹೆಚ್ಚಳಕ್ಕೆ ಸಿಎಂಗೆ ಮನವಿ ಮಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು, ಎ. 26: ‘ಹಾಲಿನ ಸಂಸ್ಕರಣೆ, ಕಚ್ಚಾ ಸಾಮಗ್ರಿಗಳು, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿದಂತೆ ಬಹುತೇಕ ಎಲ್ಲ ವೆಚ್ಚಗಳು ಶೇ.30ರಷ್ಟು ಹೆಚ್ಚಾಗಿರುವುದನ್ನು ಪರಿಗಣಿಸಿ ರೈತರಿಗೆ ಹೆಚ್ಚುವರಿ ದರ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ‘ನಂದಿನಿ ಹಾಲಿನ ದರ'ವನ್ನು ಹೆಚ್ಚಳ ಮಾಡಬೇಕು' ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ‘ಪ್ರತಿ ಲೀಟರ್ ಹಾಲಿಗೆ ಕನಿಷ್ಠ 3 ರೂ.ಗಳನ್ನು ಹೆಚ್ಚಿಗೆ ಮಾಡುವಂತೆ ಸಿಎಂಗೆ ಕೋರಿದ್ದು, ಅಮೂಲ್ ಸೇರಿದಂತೆ ದೇಶದ ವಿವಿಧ ಸಹಕಾರ ಮತ್ತು ಖಾಸಗಿ ಸಂಸ್ಥೆಗಳ ಹಾಲಿನ ಮಾರಾಟ ದರವನ್ನು ಈಗಾಗಲೇ ಹೆಚ್ಚಿಸಿದ್ದು, ನಂದಿನಿ ಹಾಲಿನ ಮಾರಾಟ ದರಕ್ಕೆ ತುಲನೆ ಮಾಡಿದಾಗ ಇತರೇ ಸಂಸ್ಥೆಗಳ ದರವು ಪ್ರತಿ ಲೀಟರ್‍ಗೆ 8ರಿಂದ 10ರೂ.ಗೆ ಹೆಚ್ಚಳವಾಗಿದೆ' ಎಂದು ಗಮನ ಸೆಳೆದಿದ್ದಾರೆ.
‘ಹಾಲಿನ ಮಾರಾಟ ದರವು ಕನಿಷ್ಟ ಪ್ರತಿ ಲೀಟರ್‍ಗೆ 3 ರೂ.ಹೆಚ್ಚಿಸಲು ಸಿಎಂ ಕೂಡಲೇ ಕ್ರಮ ಕೈಗೊಳ್ಳಬೇಕು. ಹೆಚ್ಚಳ ಮಾಡಲಿರುವ 3 ರೂ.ಗಳಲ್ಲಿ ಕನಿಷ್ಠ 2 ರೂ.ಅನ್ನು ಹಾಲು ಉತ್ಪಾದಕರಿಗೆ ಮತ್ತು ಉಳಿದ 1ರೂ.ಅನ್ನು ಹಾಲು ಉತ್ಪಾದಕರ ಸಹಕಾರಿ ಸಂಘ, ಹಾಲು ಒಕ್ಕೂಟ ಮತ್ತು ಹಾಲು ಮಾರಾಟಗಾರರಿಗೆ ನೀಡಲಾಗುವುದು' ಎಂದು ಅವರು ಸ್ಪಷ್ಟಣೆ ನೀಡಿದ್ದಾರೆ.
‘ಕೆಎಂಎಫ್ ಹಾಗೂ ರಾಜ್ಯದಲ್ಲಿರುವ ಎಲ್ಲ 14 ಹಾಲು ಒಕ್ಕೂಟಗಳ ಒಟ್ಟಾರೆ ವಹಿವಾಟು 2019-20ರಲ್ಲಿ 16,440 ಕೋಟಿ ರೂ.ಇದ್ದು, ಪ್ರಸಕ್ತ ಸಾಲಿಗೆ 19,732 ಕೋಟಿ ರೂ.ಗೆ ಹೆಚ್ಚಳವಾಗಿದೆ. 2ವರ್ಷಗಳ ಅವಧಿಯಲ್ಲಿ ಶೇ.20ರಷ್ಟು ವಹಿವಾಟು ಹೆಚ್ಚಳವಾಗಿದ್ದು, 2022-23ನೆ ಸಾಲಿನಲ್ಲಿ ಒಟ್ಟಾರೆ 25 ಸಾವಿರ ಕೋಟಿ ರೂ.ತಲುಪುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಟ್ಟಡಕ್ಕೆ ಕೆಎಂಎಫ್‍ನಿಂದ ನೀಡಲಾಗುತ್ತಿರುವ ಅನುದಾನವನ್ನು 3.50ಲಕ್ಷ ರೂ.ಗಳಿಂದ 5ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. 2020-21ನೆ ಸಾಲಿನಲ್ಲಿ 250 ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ 10.57 ಕೋಟಿ ರೂ.ಅನುದಾನ ನೀಡಲಾಗಿದ್ದು, 2021-22ನೇ ಸಾಲಿನಲ್ಲಿ 15.15 ಕೋಟಿ ರೂ.ಗಳ ಅನುದಾನವನ್ನು ಇದಕ್ಕೆ ತೆಗೆದಿರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
‘ಕೆಎಂಎಫ್‍ನಿಂದ ಪೂರೈಸಲಾಗಿರುವ ಪಶು ಆಹಾರ ದರದಲ್ಲಿ ಪ್ರತಿ ಟನ್‍ಗೆ 500ರಿಂದ 2ಸಾವಿರ ರೂ.ವರೆಗೆ ವಿವಿಧ ಸಂದರ್ಭಗಳಲ್ಲಿ ರಿಯಾಯಿತಿ ನೀಡಲಾಗಿದೆ. ಎರಡುವರೆ ವರ್ಷಗಳಲ್ಲಿ ಒಟ್ಟು 160 ಕೋಟಿ ರೂ.ಗಿಂತ ಹೆಚ್ಚಿನ ರಿಯಾಯಿತಿ ನೀಡಲಾಗಿದೆ. ಧಾರವಾಡ ಮತ್ತು ಗುಬ್ಬಿ ಪಶು ಆಹಾರ ಘಟಕಗಳಲ್ಲಿ ಆಹಾರ ಉತ್ಪಾದನಾ ಸಾಮಥ್ರ್ಯವನ್ನು ತಲಾ 300 ಟನ್‍ನಂತೆ ಒಟ್ಟು 600 ಟನ್ ಪ್ರತಿದಿನಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ ಕೆ.ಆರ್.ಪೇಟೆ, ಮಂಡ್ಯ, ಅರಕಲಗೂಡು, ಹಾಸನ ಜಿಲ್ಲೆಗಳಲ್ಲಿ ಹೊಸ ಘಟಕಗಳನ್ನು ಸ್ಥಾಪಿಸಿ ಈಗಾಗಲೇ ಪ್ರತಿ ತಿಂಗಳಲ್ಲಿ 45 ಸಾವಿರ ಟನ್ ಪೂರೈಕೆಯಾಗುತ್ತಿದ್ದ ಪಶು ಆಹಾರ ಪ್ರಮಾಣವನ್ನು 65 ಸಾವಿರ ಟನ್‍ಗೆ ಹೆಚ್ಚಿಸಲಾಗಿದೆ. ಈ ಗುರಿಯನ್ನು ಮುಂದಿನ ಸಾಲಿಗೆ 75 ಸಾವಿರ ಟನ್ ಗುಣಮಟ್ಟದ ಪಶು ಆಹಾರ ಪೂರೈಕೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಾಲಚಂದ್ರ ಜಾರಕಿಹೊಳಿ ಪತ್ರದಲ್ಲಿ ತಿಳಿಸಿದ್ದಾರೆ.







