ಬಿಜೆಪಿಯ ಒತ್ತಡ ತಂತ್ರಕ್ಕೆ ಮಣಿದ ಪೊಲೀಸ್ ಇಲಾಖೆ : ಪಿಎಫ್‌ಐ ಆಕ್ರೋಶ
ಮಂಗಳೂರು: ಎಳನೀರು ವ್ಯಾಪಾರಿಯ ವ್ಯವಹಾರಕ್ಕೆ ಅಡ್ಡಪಡಿಸಿದ ಆರೋಪದಲ್ಲಿ ಸಂಘಪರಿವಾರದ ಕಾರ್ಯ ಕರ್ತರನ್ನು ವಿಚಾರಣೆಗೊಳಪಡಿಸಿದ ಬಜ್ಪೆ ಇನ್‌ಸ್ಪೆಕ್ಟರ್ ಸಂದೇಶ್ ಮತ್ತಿತರ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿದ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಘಪರಿವಾರದ ಆರೋಪಿಗಳು ತಮ್ಮ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಆರೋಪಿದ ತಕ್ಷಣವೇ ಪೊಲೀಸರ ಅಮಾನತಿಗೆ ಆದೇಶ ಹೊರಡಿಸಲಾಗಿದೆ. ಬಿಜೆಪಿಯ ಒತ್ತಡದಿಂದಲೇ ಪೊಲೀಸರನ್ನು ಏಕಾಏಕಿ ಅಮಾನತುಗೊಳಿಸಲಾಗಿದೆ. ಆರೋಪ ಬಂದ ಕ್ಷಣ ಪೊಲೀಸರನ್ನು ಅಮಾನತುಗೊಳಿಸುವುದಾದರೆ, ಪ್ರತಿಭಟನಾ ನಿರತ ಮುಸ್ಲಿಮರ ವಿರುದ್ಧ ಅಮಾನುಷವಾಗಿ ಲಾಠಿಚಾರ್ಚ್ ನಡೆಸಿದ, ಗೋಲಿಬಾರ್ ಮೂಲಕ ಹತ್ಯೆ ನಡೆಸಿದ ಆರೋಪ ಹೊತ್ತ ಸಂಘಪರಿವಾರದ ಹಿನ್ನೆಲೆಯ ಪೊಲೀಸರನ್ನೂ ಅಮಾನತುಗೊಳಿಸಬೇಕಾಗಿತ್ತು. ಆದರೆ ಜಿಲ್ಲೆಯ ಪೊಲೀಸ್ ಇಲಾಖೆ ಬಿಜೆಪಿಯ ನಾಯಕರ ಆದೇಶದಂತೆ ಕರ್ತವ್ಯ ನಿರ್ವಹಿಸುತ್ತಾ ಏಕಪಕ್ಷೀಯವಾದ ಕ್ರಮ ಕೈಗೊಳ್ಳುತ್ತಿರುವುದು ಹಲವಾರು ಪ್ರಕರಣಗಳಲ್ಲಿ ಸಾಬೀತಾಗಿದೆ. ಸಂಘಪರಿವಾರದ ಕಾರ್ಯಕರ್ತರು ದುಷ್ಕೃತ್ಯ ನಡೆಸಿ ಬಂಧನಕ್ಕೊಳಗಾದರೆ ಬಿಜೆಪಿ ಶಾಸಕರು ಪ್ರಭಾವ ಬಳಸಿ ಅವರನ್ನು ಬಿಡುಗಡೆಗೊಳಿಸುವ ಪ್ರವೃತ್ತಿ ಕಂಡು ಬರುತ್ತಿತ್ತು. ಆದರೆ ಈಗ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರ ವಿರುದ್ಧವೇ ಕ್ರಮ ಕೈಗೊಂಡಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಪಿಎಫ್‌ಐ ಹೇಳಿಕೆಯಲ್ಲಿ ತಿಳಿಸಿದೆ.
ಸಂಘಪರಿವಾರದ ದುಷ್ಕರ್ಮಿಗಳ ಮೇಲೆ ಕ್ಷುಲ್ಲಕ ಪ್ರಕರಣ ದಾಖಲಿಸಿ ಬಿಡುಗಡೆಗೊಳಿಸುವುದು, ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡ ಪೊಲೀಸರನ್ನು ಅಮಾನತು ಶಿಕ್ಷೆಗೆ ಗುರಿಪಡಿಸುವುದು ಜಿಲ್ಲೆಯನ್ನು ಅರಾಜಕತೆ ಯೆಡೆಗೆ ಕೊಂಡೊಯ್ಯುವ ಸೂಚನೆಯಾಗಿದೆ. ಆದ್ದರಿಂದ ಜಿಲ್ಲಾ ಪೊಲೀಸ್ ಇಲಾಖೆ ಸಂಘಪರಿವಾರದ ಯಾವುದೇ ಒತ್ತಡಕ್ಕೆ ಮಣಿಯದೇ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ವೃತ್ತಿಧರ್ಮವನ್ನು ಪಾಲಿಸಬೇಕು. ಪೊಲೀಸ್ ಇಲಾಖೆಗೆ ಮೂಗುದಾರ ತೊಡಿಸುವ ಇಂತಹ ಕ್ರಮಗಳನ್ನು ಜಿಲ್ಲೆಯ ನಾಗರಿಕರು ಪ್ರಬಲವಾಗಿ ವಿರೋಧಿಸಬೇಕು. ಜಿಲ್ಲೆಯ ಶಾಂತಿಪ್ರಿಯ ಜನತೆ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಪರವಾಗಿ ಧ್ವನಿ ಎತ್ತಿ ಅವರಲ್ಲಿ ನೈತಿಕ ಸ್ಥೈರ್ಯ ತುಂಬಲು ಮುಂದಾಗಬೇಕು ಎಂದು ಇಜಾಝ್ ಅಹ್ಮದ್ ಕರೆ ನೀಡಿದ್ದಾರೆ.