ವಿಶೇಷ ನಿಯಂತ್ರಣಕ್ಕೆ ಅಭಿಯಾನ ನಡೆಸಿ, ಡೆಂಗಿ ನಿಯಂತ್ರಿಸಿ: ಉಡುಪಿ ಡಿಸಿ ಕೂರ್ಮಾರಾವ್

ಉಡುಪಿ : ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮುಧೂರು ಮತ್ತು ಜಡ್ಕಲ್ ಗ್ರಾಮಗಳಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮೂರು ದಿನಗಳ ವಿಶೇಷ ಡೆಂಗಿ ನಿಯಂತ್ರಣ ಅಭಿಯಾನ ನಡೆಸಿ, ಡೆಂಗಿ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಕೊಲ್ಲೂರು ವ್ಯಾಪ್ತಿಯ ಮುದೂರು ಮತ್ತು ಜಡ್ಕಲ್ ಗ್ರಾಮ ಗಳ ಡೆಂಗಿ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ, ನಿಯಂತ್ರಣಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿ, ನಂತರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಭಾಂಗಣ ದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಮುಧೂರು ಹಾಗೂ ಜಡ್ಕಲ್ ಗ್ರಾಮಗಳ ವ್ಯಾಪ್ತಿಯಲ್ಲಿ ಡೆಂಗಿ ಪ್ರಕರಣ ಗಳು ಹೆಚ್ಚಾಗಿ ಕಂಡು ಬರಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಬೇಕು. ಪ್ರತಿ ಮನೆಗಳಿಗೆ ಭೇಟಿ ನೀಡಿ, ಜ್ವರದ ಪರೀಕ್ಷೆಗಳನ್ನು ಮಾಡಿ, ಶಂಕಿತರು ಕಂಡು ಬಂದಲ್ಲಿ ಡೆಂಗಿ ಪರೀಕ್ಷೆ ನಡೆಸಿ. ಡೆಂಗಿ ಕಂಡುಬಂದಲ್ಲಿ ತಕ್ಷಣ ಸೂಕ್ತ ಚಿಕಿತ್ಸೆಯನ್ನು ನೀಡಬೇಕು. ಚಿಕಿತ್ಸೆ ನೀಡಲು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತ್ಯೇಕ ಡೆಂಗಿ ವಾರ್ಡನ್ನು ತೆರೆಯಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು. ಮಳೆಯ ನೀರು ಅಥವಾ ಇತರೆ ನೀರುಗಳು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದ ಅವರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ, ಮನೆಯ ಸುತ್ತಮುತ್ತ ನೀರು ನಿಂತಿರುವ ಬಗ್ಗೆ ಪರಿಶೀಲಿಸಿ, ಒಂದೊಮ್ಮೆ ನಿಂತಿದ್ದಲ್ಲಿ ಅದನ್ನು ನಿಲ್ಲದಂತೆ ಮಾಡಿ, ಸೊಳ್ಳೆಗಳ ಸಂತಾನೋತ್ಪತ್ತಿಗೆ ಅವಕಾಶವಾಗದಂತೆ ಕ್ರಮ ವಹಿಸಬೇಕು ಎಂದರು.
ಡೆಂಗಿ ನಿಯಂತ್ರಣ ಕುರಿತು ವಿಶೇಷ ಅಭಿಯಾನವನ್ನು ಇದೇ ತಿಂಗಳ ೨೮ರಿಂದ ೩೦ರವರೆಗೆ ಇತರೆ ಇಲಾಖೆಗಳ ಸಹಯೋಗದೊಂದಿಗೆ ಕೈಗೊಳ್ಳಬೇಕು. ಈ ಸಂದರ್ಭದಲ್ಲಿ ಸ್ಥಳೀಯ ಜನರಿಗೆ ಅವರು ಬಳಸುವ ಭಾಷೆಯಲ್ಲಿಯೇ ಆರೋಗ್ಯ ಶಿಕ್ಷಣ ನೀಡಬೇಕು. ನಾಟಕ, ಯಕ್ಷಗಾನ ಅಥವಾ ಸ್ಥಳೀಯ ಕಲೆಗಳನ್ನು ಬಳಸಿಕೊಂಡು ಡೆಂಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಚಾರಪಡಿಸಬೇಕು ಎಂದರು.
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳೀಯ ತೋಟಗಳ ಅಡಿಕೆ ಹಾಳೆಗಳಲ್ಲಿ ಹಾಗೂ ರಬ್ಬರ್ ಪ್ರೊಸೆಸ್ಸಿಂಗ್ ಘಟಕಗಳಲ್ಲಿ ಅಥವಾ ಸಂಸ್ಕರಣಾ ಘಟಕಗಳಲ್ಲಿ ನೀರು ನಿಲ್ಲದಂತೆ ಒಂದು ವಾರಗಳ ಕಾಲ ಸತತವಾಗಿ ನೋಡಿ ಕೊಳ್ಳಬೇಕು ಎಂದರು.
ಮುಧೂರು, ಜಡ್ಕಲ್ ಗ್ರಾಮಗಳ ವ್ಯಾಪ್ತಿಯಲ್ಲಿ ಶಂಕಿತ ೨೪೪ ಪರೀಕ್ಷೆಗಳನ್ನು ಕೈಗೊಂಡಾಗ ೫೧ ಜನರಿಗೆ ಡೆಂಗಿ ಇರುವುದು ಕಂಡು ಬಂದಿದೆ. ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ರಕ್ತ ಪರೀಕ್ಷೆಯನ್ನು ಕೈಗೊಂಡು ವರದಿ ಶೀಘ್ರದಲ್ಲಿಯೇ ನೀಡಬೇಕು ಎಂದರು.
ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಮಾತನಾಡಿ, ಸ್ಥಳೀಯ ಗ್ರಾಪಂ ವತಿಯಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಇರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಜನರಿಗೆ ಕರಪತ್ರಗಳು ಸೇರಿದಂತೆ ಧ್ವನಿವರ್ಧಕಗಳ ಮೂಲಕ ನಿಯಂತ್ರಣ ಕ್ರಮದ ಕುರಿತು ಪ್ರಚಾರ ಪಡಿಸಬೇಕು. ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸ ಬೇಕು ಎಂದರು.
ಆರೋಗ್ಯ ಇಲಾಖೆಯ ವತಿಯಿಂದ ಡೆಂಗಿ ರೋಗ ಲಕ್ಷಣ, ಅವುಗಳ ಹರಡುವಿಕೆ, ಸೊಳ್ಳೆಗಳ ಉತ್ಪಾದನೆ, ಅವುಗಳಿಂದ ಈ ರೋಗಗಳ ಹರಡುವಿಕೆಯ ಬಗ್ಗೆ, ಅವುಗಳ ಚಿಕಿತ್ಸೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಕಿರು ಚಿತ್ರಗಳನ್ನು ತೆಗೆದು, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾಟ್ಸಾಪ್‌ಗಳ ಮೂಲಕ ಸ್ಥಳೀಯ ಜನರಿಗೆ ತಲುಪುವಂತೆ ಕ್ರಮ ವಹಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಅನಾನಸ್ ಬೆಳೆಯುವ ಜಮೀನುಗಳಲ್ಲಿ, ಅನಾನಸ್ ಗಿಡಗಳ ಕೆಳಗೆ ನಿಲ್ಲುವ ಅಲ್ಪಪ್ರಮಾಣದ ನೀರಿನಲ್ಲಿ ಸಹ ಸೊಳ್ಳೆಗಳ ಸಂತಾತೋತ್ಪತ್ತಿ ಮಾಡುತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಪ್ರಶಾಂತ್ ಭಟ್, ಕುಂದಾಪುರ ತಾಲೂಕು ವೈದ್ಯಾಧಿಕಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿಗಳು ಉಪಸ್ಥಿತರಿದ್ದರು.
