ಕುಂಬಾರರ ಸಂಘದ 500 ಕೋಟಿ ಆಸ್ತಿ ಕಬಳಿಸಲು ಚುನಾವಣೆಯಲ್ಲಿ ಅಕ್ರಮ: ಆರೋಪ
ಚುನಾವಣಾಧಿಕಾರಿ ಪಿ. ಮಂಜುನಾಥ್ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಂಗಳೂರು, ಎ. 26: ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವ ಕುಂಬಾರ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಕುಂಬಾರ ಸಂಘಕ್ಕೆ ಮಾ.27ರಂದು ನಡೆದ ಚುನಾವಣೆಯಲ್ಲಿ ಭಾರೀ ಅಕ್ರಮಗಳು ನಡೆದಿದ್ದು, ಚುನಾವಣೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮಗಳಿಗೆ ಅವಕಾಶ ಮಾಡಿಕೊಟ್ಟಿರುವುದು ಬಯಲಾಗಿದೆ. ರಿಜಿಸ್ಟ್ರಾರ್ ಆಫ್ ಕೋ ಆಪರೇಟಿವ್ ಸೊಸೈಟಿ ನಿಯಮಗಳಡಿ ಚುನಾವಣಾಧಿಕಾರಿಯಾಗಿ ನೇಮಕಗೊಂಡಿದ್ದ ಪಿ. ಮಂಜುನಾಥ್ ಎಂಬ ಅಧಿಕಾರಿ ಒಂದು ಬಣದ ಆಸೆ, ಆಮಿಷಗಳಿಗೆ ಬಲಿಯಾಗಿ ರಾಜಾರೋಷವಾಗಿ ಅಕ್ರಮ ಎಸಗಿದ್ದಾರೆ ಎಂದು ಕುಂಬಾರ ಸಂಘ ಗಂಭೀರ ಆರೋಪ ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಸಂಘದ ಮುಖಂಡರಾದ ಬದ್ರಿ ಪ್ರಸಾದ್, ಚುನಾವಣಾಧಿಕಾರಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇವರಿಗೆ ಬೆಂಬಲ ನೀಡಿದ 136 ಸಹಾಯಕ ಚುನಾವಣಾ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಕುಂಬಾರರ ಸಂಘದಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಇದ್ದು, ಇದನ್ನು ಕಬಳಿಸಲು ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸಮೂರ್ತಿ, ಎಂ.ಶ್ರೀನಿವಾಸಪ್ಪ, ಶಂಕರ್, ಭಾಸ್ಕರ್, ಎಂ.ಎನ್.ಜಯಕುಮಾರ್ ಮತ್ತಿತರ ತಂಡ ಸಂಘದ ಯಾವುದೇ ಚಟುವಟಿಕೆ ನಡೆಸಬಾರದು. ಇವರು ಹಾಗೂ ಚುನಾವಣಾ ಅಕ್ರಮಗಳಿಗೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶೀಘ್ರದಲ್ಲೇ ಫ್ರೀಡಂ ಪಾರ್ಕ್‍ನಿಂದ ಮುಖ್ಯಮಂತ್ರಿ ಮನೆವರೆಗೆ ಪಾದಯಾತ್ರೆ ಕೈಗೊಂಡು ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಆರ್.ಎಸ್. ಚಂದ್ರಶೇಖರ್, ಡಿ.ಕೆ. ಗೋಪಾಲ್, ರಮೇಶ್, ಎಂ.ಎನ್. ದೀಪು, ಆರ್.ಎಸ್. ಚಂದ್ರಶೇಖರ್, ಶಶಿಕಲಾ ಮತ್ತಿತರರು ಹಾಜರಿದ್ದರು.







