ಸುರತ್ಕಲ್: ಯುವಕ ನಾಪತ್ತೆ; ದೂರು ದಾಖಲು

ಸುರತ್ಕಲ್ , ಎ.26: ಇಲ್ಲಿನ ಕೋಡಿಕೆರೆ ನಿವಾಸಿಯೊಬ್ಬರು ಕಾಣೆಯಾಗಿರುವ ಕುರಿತು ಅವರ ಪತ್ನಿ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎಂಆರ್ ಪಿಎಲ್ ಗೆ ಸಂಬಂಧಿಸಿದ ಟ್ರಾವೆಲ್ಸ್ ನ ಕಾರು ಚಾಲಕರಾಗಿರುವ ಕೋಡಿಕೆರೆ ನಿವಾಸಿ ಪ್ರಸನ್ನ ಕುಮಾರ್ ಎನ್.ಶೆಟ್ಟಿ (34) ಕಾಣೆಯಾದವರು ಎಂದು ತಿಳಿದು ಬಂದಿದೆ.
ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿರುವ ಪ್ರಸನ್ನ ಕುಮಾರ್ ಅವರ ಪತ್ನಿ ಹರಿಣಿ ಅವರು, ನನ್ನ ಪತಿ ಪ್ರಸನ್ನ ಶೆಟ್ಟಿ ಅವರು ಎಂಆರ್ಪಿಎಲ್ ಗೆ ಸಂಬಂಧಿಸಿದ ಟ್ರಾವೆಲ್ಸ್ ನ ತನ್ನ ಸಂಬಂಧಿಕರೊಬ್ಬರ ಮಾಲಕತ್ವದ ಕಾರು ಚಾಲಕರಾಗಿದ್ದರು. ಎ.25ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಮನೆಯಿಂದ ಕಾರು ಚಲಾಯಿಸಿಕೊಂಡು ಹೊರಗೆ ಹೋದವರು ಬೆಳಗ್ಗೆ 11.35 ಗಂಟೆಯ ಸುಮಾರಿಗೆ ಮನೆಗೆ ವಾಪಾಸ್ ಆಗಿದ್ದರು. ಬಳಿಕ 5 ನಿಮಿಷ ಮನೆಯಲ್ಲಿದ್ದು, ಬಳಿಕ ಕಾರಿನ ಕೀ ಮತ್ತು ಟ್ರಾವೆಲ್ಸ್ ಸಂಸ್ಥೆಯವರ ಮೊಬೈಲ್‌ನ್ನು ನನ್ನ ಬಳಿ ಕೊಟ್ಟು ಚಾಲಕ ಬಂದರೆ ನೀಡುವಂತೆ ತಿಳಿಸಿ ಮನೆಯಿಂದ ಹೋದವರು ಹಿಂದಿರುಗಿಬಾರದೇ ಕಾಣೆಯಾಗಿದ್ದಾರೆ. ಕಾಣೆಯಾಗಿರುವ ನನ್ನ ಪತಿಯನ್ನು ಹುಡುಕಿ ಕೊಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಾಣೆಯಾದ ಪ್ರಸನ್ನ ಕುಮಾರ್ ಅವರು 5.5 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಕಪ್ಪು ತಲೆ ಕೂದಲು, ಮೀಸೆ ಮತ್ತು ಗಡ್ಡ ಇದೆ ಎಂದು ಪತ್ನಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.





