ಎಸ್ಸಿ-ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರ ಅಕ್ರಮ: 89 ಸರಕಾರಿ ನೌಕರರು ವಜಾ, 1,097 ವಿರುದ್ಧ ಕ್ರಿಮಿನಲ್ ಕೇಸ್

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.26: ಎಸ್ಸಿ-ಎಸ್ಟಿ ಸಮುದಾಯದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರಕಾರಕ್ಕೆ ವಂಚನೆಗೈದಿರುವ ಆರೋಪದಡಿ 89 ಸರಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸುವ ಜೊತೆಗೆ, 1,097 ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಡಿಜಿಪಿ ಡಾ.ರವೀಂದ್ರನಾಥ್ ತಿಳಿಸಿದ್ದಾರೆ.
ಮಂಗಳವಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯವ್ಯಾಪಿ ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸಿ ಸರಕಾರಿ ಇಲಾಖೆ ಹಾಗೂ ಇತರೆ ಕಡೆಗಳಲ್ಲಿ ಲಾಭ ಪಡೆಯುವ ವಂಚಕರ ವಿರುದ್ಧ ದಾಖಲಾಗಿರುವ ದೂರುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.
ಅದರಂತೆ ಸುಳ್ಳು ಜಾತಿ ಪ್ರಮಾಣ ವಿತರಿಸಿದ ಒಟ್ಟು 111 ತಹಶೀಲ್ದಾರ್, 108 ಕಂದಾಯ ನಿರೀಕ್ಷಕರು ಮತ್ತು 107 ಗ್ರಾಮ ಲೆಕ್ಕಿಗರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅದೇರೀತಿ, ತಹಶೀಲ್ದಾರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳುವಂತೆ ಒಟ್ಟು 165 ಪ್ರಕರಣಗಳಲ್ಲಿ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಅವರು ವಿವರಿಸಿದರು.
20 ವರ್ಷಗಳಿಂದ ಬಾಕಿ: ಎಸ್ಸಿ, ಎಸ್ಟಿ ನಕಲಿ ಜಾತಿ ಪ್ರಮಾಣ ಪಡೆದಿರುವುದು ಸಾಬೀತಾದ ಒಟ್ಟು 591 ಪ್ರಕರಣಗಳು ವಿವಿಧ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗಳಲ್ಲಿ ಇಪ್ಪತ್ತು ವರ್ಷಗಳಿಂದ ಇತ್ಯರ್ಥಪಡಿಸದೇ ಬಾಕಿ ಉಳಿಸಿಕೊಂಡಿದ್ದು, ಇದರಿಂದ ಶೋಷಿತ ಸಮುದಾಯದವರು ಸೌಲಭ್ಯ ವಂಚಿತರಾಗುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ದೂರು ನೀಡಿ: ಯಾರೇ ದುಷ್ಕರ್ಮಿಗಳು ನಕಲಿ ಜಾತಿ ಪ್ರಮಾಣ ಸೃಷ್ಟಿಸಿ ಲಾಭ ಪಡೆದರೆ ಅವರ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಅಥವಾ ಜಿಲ್ಲಾಡಳಿತಕ್ಕೆ ದೂರು ನೀಡಬಹುದು. ಆನಂತರ, ದೂರಿನ ಪ್ರತಿಯನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಿದರೆ, ನಾವು ಪರಿಶೀಲನಾ ಪ್ರಕ್ರಿಯೆ ಕೈಗೆತ್ತಿಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಜಿಲ್ಲಾವಾರು ಬಾಕಿ ಪ್ರಕರಣಗಳು
► ಬೀದರ್-101
► ಉತ್ತರ ಕನ್ನಡ-79
► ಕಲಬುರ್ಗಿ-68
► ಬಳ್ಳಾರಿ-61
► ಮೈಸೂರು-53
► ಕೋಲಾರ-49
► ಬೆಳಗಾವಿ-27
► ಬೆಂಗಳೂರು ನಗರ-25
► ರಾಯಚೂರು-17
► ಶಿವಮೊಗ್ಗ-16
► ಚಿತ್ರದುರ್ಗ-14
► ಮಂಡ್ಯ-11
► ಬೆಂಗಳೂರು ಗ್ರಾಮಾಂತರ-10
► ದಾವಣಗೆರೆ-9
► ಕೊಪ್ಪಳ-7
► ಯಾದಗಿರಿ-6
► ವಿಜಯಪುರ-6
► ಗದಗ-5
► ಬಾಗಲಕೋಟೆ-5
► ಚಾಮರಾಜನಗರ-5
► ಹಾಸನ-2
► ಕೊಡಗು-1
► ತುಮಕೂರು-1
► ದಕ್ಷಿಣ ಕನ್ನಡ-1
► ಹಾವೇರಿ-1
ಕ್ರಿಮಿನಲ್ ಮೊಕದ್ದಮೆ ವಲಯವಾರು
► ಬೆಂಗಳೂರು ನಗರ ವಲಯ-156
► ಬೆಂಗಳೂರು ಹೊರವಲಯ-85
► ಮೈಸೂರು ವಲಯ-116
► ಬೆಳಗಾವಿ ವಲಯ-223
► ದಾವಣಗೆರೆ ವಲಯ-164
► ಮಂಗಳೂರು ವಲಯ-205
► ಕಲಬುರ್ಗಿ ವಲಯ-148
ವಜಾಗೊಂಡ ನೌಕರರ ವಿವರ
ಪ್ರದೇಶ-ಅವಧಿ-ಒಟ್ಟು ನೌಕರರು
► ಬೆಂಗಳೂರು ಕೇಂದ್ರವಲಯ-2002ರಿಂದ 2019-14
► ಬೆಂಗಳೂರು ಪ್ರಾದೇಶಿಕ ವಲಯ-2007ರಿಂದ 2019-09
► ಮೈಸೂರು ವಲಯ-2013ರಿಂದ 2019-10
► ಬೆಳಗಾವಿ ವಲಯ-2013ರಿಂದ 2019-29
► ದಾವಣಗೆರೆ ವಲಯ-2014ರಿಂದ 2021-11
► ಮಂಗಳೂರು ವಲಯ-2008ರಿಂದ 2021-04
► ಕಲಬುರ್ಗಿ ವಲಯ-1988ರಿಂದ 2019-12
‘ಸಂವಿಧಾನ ವಿರೋಧಿ ಕೃತ್ಯ’
ಶೋಷಿತ ಹಾಗೂ ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳ ಪ್ರಗತಿಗಾಗಿ ಅವರನ್ನು ಗುರುತಿಸುವ ಸಲುವಾಗಿ ಜಾತಿ ಪ್ರಮಾಣ ನೀಡಲಾಗುತ್ತಿದೆ. ಆದರೆ, ಇದನ್ನು ತಮ್ಮ ಪ್ರಭಾವ ಬಳಸಿ ಪಡೆಯುವವರು ಸಂವಿಧಾನ ವಿರೋಧಿಗಳು. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ಪ್ರತಿಯೊಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ಡಾ.ರವೀಂದ್ರನಾಥ್, ಡಿಜಿಪಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ







