ಪೋಕ್ಸೋ ಪ್ರಕರಣ: ರಾಜಿಯಾದ ಪ್ರಕರಣ ರದ್ದುಪಡಿಸುವ ಕುರಿತು ಪರಿಶೀಲನೆ ಅಗತ್ಯ: ಹೈಕೋರ್ಟ್

ಬೆಂಗಳೂರು, ಎ.26: ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಅಪ್ರಾಪ್ತರ ವಿರುದ್ಧವೇ ದಾಖಲಾಗುವ ಪೋಕ್ಸೋ ಪ್ರಕರಣಗಳಲ್ಲಿ ಪಕ್ಷಗಾರರು ಪರಸ್ಪರ ರಾಜಿಯಾದಾಗ ಪ್ರಕರಣ ರದ್ದುಪಡಿಸಬಹುದೇ ಎಂಬ ಬಗ್ಗೆ ಪರಿಶೀಲಿಸಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅಪ್ರಾಪ್ತ ಬಾಲಕನೊಬ್ಬನ ವಿರುದ್ಧದ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿದೆ.
ಬಾಲಕನ ಪರವಾಗಿ ಆತನ ತಂದೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಮಧ್ಯಂತರ ಆದೇಶ ಮಾಡಿದೆ. ಪ್ರಕರಣದ ಆರೋಪಿ ಬಾಲಕ ಹಾಗೂ ದೂರುದಾರರ ಪುತ್ರಿ ಇಬ್ಬರೂ ಅಪ್ರಾಪ್ತರಾಗಿದ್ದಾರೆ. ಇಬ್ಬರ ನಡುವೆ ಆಪ್ತತೆ ಹುಟ್ಟಿದ ಬಳಿಕ ಪ್ರಕರಣ ದಾಖಲಾಗಿದೆ. ಈಗ ಪಕ್ಷಕಾರರು ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಲು ನಿರ್ಧರಿಸಿದ್ದು, ಕಾನೂನು ಪ್ರಕ್ರಿಯೆ ಕೈಬಿಡುವಂತೆ ಕೋರಿದ್ದಾರೆ.
ಈ ವಿಚಾರವನ್ನು ನ್ಯಾಯಾಲಯ ಪರಿಗಣಿಸುವ ಅವಶ್ಯಕತೆ ಇದ್ದು, ಬೇಸಿಗೆ ರಜೆಯ ಬಳಿಕ ವಿಚಾರಣೆ ನಡೆಸಲಾಗುವುದು. ಹೀಗಾಗಿ, ಮೇ 23ರವರೆಗೆ ಪ್ರಕರಣದ ತನಿಖೆಗೆ ತಡೆ ನೀಡಲಾಗುತ್ತಿದೆ. ಇದು ಅರ್ಜಿ ಸಂಬಂಧ ನ್ಯಾಯಾಲಯ ಹೊರಡಿಸುವ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.





