‘ಹ್ಯೂಮನ್ ರೈಟ್ಸ್ ವಾಚ್’ ಸಂಸ್ಥೆಯ ಮುಖ್ಯಸ್ಥ ಹುದ್ದೆ ತೊರೆಯಲಿರುವ ಕೆನ್ನೆತ್ ರಾಥ್

Photo: Twitter/KenRoth
ನ್ಯೂಯಾರ್ಕ್, ಎ.26: ಮಾನವ ಹಕ್ಕು ನಿಗಾ ಸಂಸ್ಥೆ ‘ಹ್ಯೂಮನ್ ರೈಟ್ಸ್ ವಾಚ್’ ನ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಯಿಂದ ಆಗಸ್ಟ್ ಅಂತ್ಯಕ್ಕೆ ಕೆಳಗಿಳಿಯುವುದಾಗಿ ಕೆನ್ನೆತ್ ರಾಥ್ ಮಂಗಳವಾರ ಹೇಳಿದ್ದಾರೆ. ಅವರು ಸುಮಾರು 3 ದಶಕಗಳ ಕಾಲ ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದರು.
ಅವರ ಉತ್ತರಾಧಿಕಾರಿಯನ್ನು ಮುಕ್ತನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುವುದು. ಈಗ ಉಪ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ತಿರಾನಾ ಹಸನ್ ಹಂಗಾಮಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ. ಪ್ರಪಂಚದಾದ್ಯಂತ ಗಂಭೀರ ಮಾನವಹಕ್ಕು ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಮತ್ತು ಮೊಟಕುಗೊಳಿಸುವ ಕಾರ್ಯವನ್ನು ಹ್ಯೂಮನ್ ರೈಟ್ಸ್ ವಾಚ್ ನಿರ್ವಹಿಸುತ್ತದೆ.
1987ರಲ್ಲಿ ಉಪ ನಿರ್ದೇಶಕರಾಗಿ ಸಂಸ್ಥೆಗೆ ನೇಮಕಗೊಂಡಿದ್ದ ರಾಥ್, ಸುಮಾರು 30 ವರ್ಷ ಕಾರ್ಯನಿರ್ವಹಿಸಿದ್ದರು. ಅವರು ನೇಮಕಗೊಂಡ ಸಂದರ್ಭ ಸಂಸ್ಥೆಯಲ್ಲಿ 60 ಸಿಬಂದಿಗಳಿದ್ದರೆ ಈಗ 525 ಸಿಬಂದಿಗಳಿದ್ದು ಸಂಸ್ಥೆಯ ಕಾರ್ಯನಿರ್ವಹಣೆಯ ವ್ಯಾಪ್ತಿಯಡಿ 100ಕ್ಕೂ ಅಧಿಕ ದೇಶಗಳಿವೆ. ಮಾನವ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಅತ್ಯಂತ ಪರಿಣಾಮಕಾರಿ ಕಾರ್ಯತಂತ್ರದ ಬಗ್ಗೆ ತನ್ನ ವೈಯಕ್ತಿಕ ಅನುಭವದ ಪುಸ್ತಕ ಬರೆಯುವುದಾಗಿ ರಾಥ್ ಹೇಳಿದ್ದಾರೆ. ರಾಥ್ ತಮ್ಮ ಕಾರ್ಯಾವಧಿಯಲ್ಲಿ 50ಕ್ಕೂ ಅಧಿಕ ದೇಶಗಳಿಗೆ ತನಿಖೆ ಅಥವಾ ವಕಾಲತ್ತು ಪ್ರವಾಸ ಮಾಡಿದ್ದು ಹಲವು ವಿಶ್ವಮುಖಂಡರು, ಸಚಿವರನ್ನು ಭೇಟಿಯಾಗಿದ್ದರು.







