ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ: 6 ಆರೋಪಿಗಳಿಗೆ ನ್ಯಾಯಾಂಗ ಬಂಧನ ವಾರೆಂಟ್ ಜಾರಿ

ದಿವ್ಯಾ ಹಾಗರಗಿ
ಬೆಂಗಳೂರು, ಎ.26: ಪಿಎಸ್ಸೈ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ದಿವ್ಯಾ ಹಾಗರಗಿ ಸೇರಿ ಆರು ಜನ ಆರೋಪಿಗಳಿಗೆ ನ್ಯಾಯಾಲಯ ಬಂಧನ ವಾರೆಂಟ್ ಜಾರಿ ಮಾಡಿದೆ.
ನೇಮಕಾತಿ ಪರೀಕ್ಷಾ ಅಕ್ರಮದ ರೂವಾರಿ ಎನ್ನಲಾದ ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ರವೀಂದ್ರ ಮೇಳಕುಂದಿ, ಅರ್ಚನಾ, ಕಾಶಿನಾಥ್, ಶಾಂತಿಬಾಯಿಗೆ ಕಲಬುರ್ಗಿಯ 3ನೆ ಜೆಎಂಎಫ್ಸಿ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ.
ಮುಂಬೈ ಸ್ಫೋಟ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂಗೆ ನೀಡಲಾಗಿದ್ದ ಬಂಧನ ವಾರೆಂಟ್ ಉಲ್ಲೇಖಿಸಿ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಿದ್ದರು. ಒಂದು ವಾರದೊಳಗಡೆ ಆರೋಪಿಗಳು ಶರಣಾಗಬೇಕು. ಇಲ್ಲದಿದ್ದರೆ, ಉದ್ಘೋಷಿತ ಅಪರಾಧಿ ಎಂದು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಎಲ್ಲ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ ದಿವ್ಯಾ ಹಾಗರಗಿ ಮತ್ತು ಸಹಚರರ ಬಂಧನಕ್ಕೆ ಸಿಐಡಿ ತೀವ್ರ ಶೋಧ ಕಾರ್ಯಾರಂಭಿಸಿದೆ. ಜತೆಗೆ ಪೊಲೀಸ್ ನೇಮಕಾತಿ ವಿಭಾಗದ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರನ್ನು ವಿಚಾರಣೆ ನಡೆಸಲು ಸಿದ್ಧತೆ ನಡೆದಿದೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಮತ್ತೋರ್ವ ಅಭ್ಯರ್ಥಿಯನ್ನು ಬಂಧಿಸಿದ್ದಾರೆ.
ಎನ್.ವಿ.ಸುನೀಲ್ ಕುಮಾರ್ ಬಂಧಿತ. ಕಲಬುರ್ಗಿ ಮೂಲದ ಈತ ಜ್ಞಾನ ಜ್ಯೋತಿ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಮೂಲಕ ಪರೀಕ್ಷೆ ಬರೆದಿದ್ದಾನೆ ಎನ್ನಲಾಗಿದೆ.
ಈತ ಸುಮಾರು 40 ಲಕ್ಷ ರೂ.ಗೂ ಹೆಚ್ಚು ಹಣ ಕೊಟ್ಟಿರುವ ಮಾಹಿತಿ ಲಭ್ಯವಾಗಿದೆ. ಮೂರು ದಿನಗಳ ಹಿಂದೆ ಆರ್.ಡಿ.ಪಾಟೀಲ್ ಹಾಗೂ ಸ್ನೇಹಿತ ಮಂಜುನಾಥ ಯಾನೆ ಮಲ್ಲುಗೌಡನನ್ನು ಬಂಧಿಸಿರುವ ಸಿಐಡಿ, ಇಬ್ಬರನ್ನು 13 ದಿನ ಕಸ್ಟಡಿಗೆ ಪಡೆದಿದೆ. ಸದ್ಯ ಬಂಧಿತರ ಸಂಖ್ಯೆ 16ಕ್ಕೇರಿದೆ.







