ಕೇಂದ್ರ ಸರಕಾರ ತಾರತಮ್ಯ ನೀತಿಯಿಂದ ಬಡವರಿಗೆ ಬರೆ: ಮಾಜಿ ಸಚಿವ ಕೃಷ್ಣಭೈರೇಗೌಡ

ಬೆಂಗಳೂರು, ಎ. 26: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಶ್ರೀಮಂತರ ಪರವಾದ ಆಡಳಿತ ನೀತಿ ಅನುಸರಿಸುತ್ತಿದ್ದು, ಇದರಿಂದಾಗಿ ದೇಶದಲ್ಲಿ ಬಡವ-ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿರುವುದು ದುರದೃಷ್ಟಕರ ಸಂಗತಿ' ಎಂದು ಮಾಜಿ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಇಲ್ಲಿನ ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಜಕ್ಕೂರಿನ ಅಂಬೇಡ್ಕರ್ ಸಮುದಾಯಭವನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಅಂಬೇಡ್ಕರ್ ಅವರ 131ನೆ ಜಯಂತ್ಯುತ್ಸವ ಹಾಗೂ ನೂತನವಾಗಿ ನಿರ್ಮಿಸಿರುವ ಅಂಬೇಡ್ಕರ್ ಸಮುದಾಯ ಭವನದ ಮೊದಲ ಮಹಡಿಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರಕಾರದ ಎಂಟು ವರ್ಷಗಳ ಆಡಳಿತಾವಧಿಯಲ್ಲಿ ಬೆರಳೆಣಿಕೆಯ ಕೆಲವೇ ಶ್ರೀಮಂತರು ದೇಶಕ್ಕೆ ಲಕ್ಷಾಂತರ ಕೋಟಿ ರೂ.ವಂಚಿಸಿದ್ದಾರೆ ಎಂದು ದೂರಿದರು.
ಕೇವಲ ಅಂಬಾನಿ, ಅದಾನಿಯ ಆದಾಯ ಸುಮಾರು 12.5 ಲಕ್ಷ ಕೋಟಿ ರೂ.ಗಳಷ್ಟಿದೆ. ಅಲ್ಲದೆ, ಕೇಂದ್ರ ಸರಕಾರ ಶ್ರೀಮಂತ ಉದ್ಯಮಿಗಳಿಗೆ ಶೇ.30ರಷ್ಟು ತೆರಿಗೆ ವಿನಾಯಿತಿ ನೀಡಿದೆ. ಬಡವರ ಮೇಲಿನ ತೆರಿಗೆಯ ಪ್ರಮಾಣವನ್ನು ಹೆಚ್ಚಿಸಿರುವ ಪರಿಣಾಮ, ದೇಶದಲ್ಲಿ ಬಡವ-ಶ್ರೀಮಂತರ ನಡುವಿನ ಅಂತರ ಹೆಚ್ಚಾಗಿದ್ದು ಬಡವ ಬಡವನಾಗಿಯೆ ಇದ್ದಾನೆ. ಈ ಸರಕಾರದಲ್ಲಿ ಬಡವರ ಉದ್ಧಾರ ಸಾಧ್ಯವಿಲ್ಲ ಎಂದು ಅವರು ಕಿಡಿಕಾರಿದರು.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ಎಸ್ಸಿ-ಎಸ್ಟಿಗಳಿಗೆ ನೀಡುತ್ತಿದ್ದ ಸಹಾಯಧನದ ಮೊತ್ತವನ್ನು ಶೇ.80ರಷ್ಟು ಹಾಗೂ ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳಿಗೆ ಶೇ.50ರಷ್ಟು ಕಡಿತಗೊಳಿಸಿದೆ. ಇಂತವರಿಂದ ಈ ಜನಾಂಗಗಳ ಅಭಿವೃದ್ಧಿಯ ನಿರೀಕ್ಷೆಯು ಕನಸಿನ ಮಾತಾಗಿದೆ ಎಂದು ಕೃಷ್ಣ ಬೈರೇಗೌಡ ಟೀಕಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ದಲಿತ ಸಮುದಾಯವು ಅಂಬೇಡ್ಕರ್, ಬುದ್ಧ ಹಾಗೂ ಬಸವಣ್ಣನವರನ್ನು ಎಂದಿಗೂ ಮರೆಯಬಾರದು. ಈ ಮೂವರ ತತ್ವ-ಸಿದ್ಧಾಂತಗಳು ಜೀವನ ಸುಧಾರಣೆಗೆ ಬಹಳ ಹತ್ತಿರವಾಗಿರುವುದರಿಂದ ಇವುಗಳ ಅರಿವು ಪಡೆದುಕೊಳ್ಳುವುದರ ಜೊತೆಗೆ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ದಸಂಸ ರಾಜ್ಯ ಸಂಯೋಜಕ ವಿ.ನಾಗರಾಜ್, ಅಂಬೇಡ್ಕರ್ ಸಮುದಾಯ ಭವನ ಟ್ರಸ್ಟ್ ಅಧ್ಯಕ್ಷ ರವಿಕುಮಾರ್, ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಡಾ.ಆರ್.ಜಯಶಂಕರ್, ಕಾಂಗ್ರೆಸ್ ಮುಖಂಡರಾದ ಎಂ.ಹನುಮಂತೇಗೌಡ, ಎನ್.ಎನ್.ಶ್ರೀನಿವಾಸಯ್ಯ, ಬಿ.ಜಿ.ರಮೇಶ್, ಹಿರಿಯ ವಕೀಲ ಎಸ್.ವಿ.ರಾಮಚಂದ್ರಪ್ಪ ಹಾಜರಿದ್ದರು.







