ಸುಳ್ಳು ಜಾತಿ ಪ್ರಮಾಣ ಪಡೆದ ಆರೋಪ: ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ನಿವಾಸಕ್ಕೆ ನೋಟಿಸ್ ಅಂಟಿಸಿದ ಇನ್‍ಸ್ಪೆಕ್ಟರ್

ಬೆಂಗಳೂರು, ಎ.26: ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಐಪಿಎಸ್ ಹುದ್ದೆ ಗಿಟ್ಟಿಸಿದ ಆರೋಪಕ್ಕೆ ಗುರಿಯಾಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರ ನಿವಾಸದ ದ್ವಾರಕ್ಕೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ(ಡಿಸಿಆರ್‍ಇ)ದ ಇನ್‍ಸ್ಪೆಕ್ಟರ್ ನೋಟಿಸ್ ಅಂಟಿಸಿ ಬಂದಿದ್ದಾರೆ.
ಮಂಗಳವಾರ ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಮಹಾನಿರ್ದೇಶಕ ಡಾ.ಪಿ.ರವೀಂದ್ರನಾಥ್, ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣ ಸಂಬಂಧ ಜಾತಿ ಬಗ್ಗೆ ನಿರ್ಧರಿಸಲು ಲಭ್ಯವಿರುವ ಶಾಲಾ ಹಾಗೂ ಇತರೆ ದಾಖಲೆಗಳೊಂದಿಗೆ ಸೋಮವಾರ ಡಿಸಿಆರ್‍ಇ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಕೆಂಪಯ್ಯ ಅವರಿಗೆ ನೋಟಿಸ್ ನೀಡಲಾಗಿತ್ತು.
ನೋಟಿಸ್ ಸ್ವೀಕರಿಸಿದ್ದ ಕೆಂಪಯ್ಯ ಅವರು ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದರು. ಆದರೆ, ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಹೀಗಾಗಿ ನಿಯಮಾನುಸಾರ ಡಿಸಿಆರ್‍ಇ ಇನ್‍ಸ್ಪೆಕ್ಟರ್ ಕುಮಾರಸ್ವಾಮಿ ಮಂಗಳವಾರ ಕೆಂಪಯ್ಯ ಅವರ ನಿವಾಸಕ್ಕೆ ತೆರಳಿ ನೋಟಿಸ್ ಅಂಟಿಸಿ ಬಂದಿದ್ದಾರೆ ಎಂದರು.
ಎ.28ರಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‍ನಲ್ಲಿ ಸೂಚಿಸಲಾಗಿದೆ. ಅಲ್ಲದೆ, ಕೆಂಪಯ್ಯ ಅವರ ವಿರುದ್ಧ ಬಹಳ ಹಿಂದೆಯೇ ಸುಳ್ಳು ಜಾತಿ ಪ್ರಮಾಣ ಪತ್ರ ದೂರು ದಾಖಲಾಗಿತ್ತು. ಆ ಕಡತ ಬೇರೆ ಕಪಾಟು ಸೇರಿದ್ದರಿಂದ ವಿಚಾರಣೆ ಮಾಡಿರಲಿಲ್ಲ. ಇತ್ತೀಚೆಗೆ ಕಡತಗಳ ಪರಿಶೀಲನೆ ವೇಳೆ ಕೆಂಪಯ್ಯ ಅವರ ಕಡತ ಸಿಕ್ಕಿತು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದೀಗ ಅವರ ಮನೆಗೆ ನೋಟಿಸ್ ಅಂಟಿಸಲಾಗಿದ್ದು, ನಿಗದಿತ ದಿನಾಂಕದಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಒಂದು ವೇಳೆ ಮತ್ತೆ ಅವರು ವಿಚಾರಣೆಗೆ ಗೈರು ಹಾಜರಾದರೆ, ನಿಯಮಾನುಸಾರ ಡಿಸಿಆರ್ ಇ ಪೊಲೀಸರು, ಕೆಂಪಯ್ಯ ಅವರ ಊರು, ಮನೆ, ವ್ಯಾಸಂಗ ಮಾಡಿದ ಶಾಲೆಗಳಿಗೆ ತೆರಳಿ ವಿಚಾರಣೆ ಮಾಡಲಿದ್ದಾರೆ ಎಂದು ಹೇಳಿದರು.
ವೇತನ ಹಿಂದಕ್ಕೆ ಪಡೆಯಬಹುದು
ಯಾವುದೇ ವ್ಯಕ್ತಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಸರಕಾರಿ ನೌಕರರಿಗೆ ಗಿಟ್ಟಿಸಿರುವುದು ಸಾಬೀತಾದರೆ ಅಪರಾಧವಾಗುತ್ತದೆ. ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ. ಆ ವ್ಯಕ್ತಿ ಸೇವೆಯಲ್ಲಿ ಇದ್ದರೆ ಸೇವೆಯಿಂದ ವಜಾಗೊಳಿಸಲಾಗುತ್ತದೆ. ಸೇವೆಯಿಂದ ನಿವತ್ತಿಯಾಗಿದ್ದರೆ, ಸೇವಾ ಅವಧಿಯಲ್ಲಿ ಪಡೆದಿರುವ ವೇತನ ಹಾಗೂ ನಂತರ ಪಡೆಯುತ್ತಿರುವ ಪಿಂಚಣೆ ಹಿಂಪಡೆಯಲು ಕಾನೂನಿನಲ್ಲಿ ಅವಕಾಶವಿದೆ ಎಂದು ರವೀಂದ್ರನಾಥ್ ಮಾಹಿತಿ ನೀಡಿದರು.







