22,800 ಕೋ.ರೂ.ಅಕ್ರಮ ಹಣ ವರ್ಗಾವಣೆ ಪ್ರಕರಣ: ಎಬಿಜಿ ಶಿಪ್‌ಯಾರ್ಡ್ ಗೆ ಸೇರಿದ ಸ್ಥಳಗಳಲ್ಲಿ ಈ.ಡಿ.ದಾಳಿ
ಹೊಸದಿಲ್ಲಿ,ಎ.26: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈ.ಡಿ.)ವು ಮಂಗಳವಾರ ಗುಜರಾತ ಮೂಲದ ಎಬಿಜಿ ಶಿಪ್ಯಾರ್ಡ್ ಮತ್ತು ಅದರ ನಿರ್ದೇಶಕರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆಗಳನ್ನು ಆರಂಭಿಸಿದೆ. ಮುಂಬೈ,ಪುಣೆ ಮತ್ತು ಸೂರತ್ನ ಹಲವಾರು ಸ್ಥಳಗಳಲ್ಲಿ ದಾಳಿಗಳು ನಡೆದಿವೆ. ಪ್ರಕರಣವು ಕಂಪನಿಯಿಂದ 22,800 ಕೋ.ರೂ.ಗೂ ಅಧಿಕ ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದೆ.
ಈ.ಡಿ.ಪ್ರಕರಣವು ಫೆ.7ರಂದು ಸಿಬಿಐ ದಾಖಲಿಸಿರುವ ಎಫ್ಐಆರ್ನ್ನು ಆಧರಿಸಿದೆ. ಕಂಪನಿಯು 28 ಬ್ಯಾಂಕುಗಳ ಕೂಟದಿಂದ ತನಗೆ ನೀಡಲಾಗಿದ್ದ ಸಾಲಗಳನ್ನು ನಿಗದಿತ ಉದ್ದೇಶಕ್ಕೆ ಬಳಸಿಲ್ಲ ಮತ್ತು ಇತರ ಸಾಲಗಳನ್ನು ತೀರಿಸಲು ಅದನ್ನು ಬಳಸಿಕೊಂಡಿತ್ತು,ಇದಕ್ಕಾಗಿ ತನ್ನ ಸಹಸಂಸ್ಥೆಗಳ ಮೂಲಕ ಹಣವನ್ನು ವರ್ಗಾವಣೆಗೊಳಿಸಿತ್ತು ಎಂದು ಆರೋಪಿಸಲಾಗಿದೆ.
ಪ್ರವರ್ತಕ ರಿಷಿ ಅಗರವಾಲ್ ಸೇರಿದಂತೆ ಕಂಪನಿಯ ಹಲವಾರು ಅಧಿಕಾರಿಗಳನ್ನು ಈಗಾಗಲೇ ಪ್ರಶ್ನಿಸಿರುವ ಸಿಬಿಐ,ಹಣದ ವರ್ಗಾವಣೆಗಾಗಿ ಎಬಿಜಿ 98 ಸಂಬಂಧಿತ ಕಂಪನಿಗಳನ್ನು ಬಳಸಿಕೊಂಡಿತ್ತು ಎನ್ನುವುದನ್ನು ಪತ್ತೆ ಹಚ್ಚಿದೆ. ಇದು ಅಕ್ರಮ ಹಣ ವರ್ಗಾವಣೆಯನ್ನು ಬೆಟ್ಟು ಮಾಡುತ್ತಿದೆ ಎಂದು ಈ.ಡಿ.ಅಧಿಕಾರಿಗಳು ಹೇಳಿದ್ದಾರೆ.
ಎಬಿಜಿ ಸಮೂಹವು ಈ.ಡಿ.ತನಿಖೆಗೆ ಒಳಗಾಗಿರುವುದು ಇದೇ ಮೊದಲಲ್ಲ. 2019ರಲ್ಲಿ ಐಎಲ್ ಆ್ಯಂಡ್ ಎಫ್ಎಸ್ನ ವ್ಯವಹಾರಗಳ ಕುರಿತು ತನ್ನ ತನಿಖೆಗೆ ಸಂಬಂಧಿಸಿದಂತೆ ಈ.ಡಿ.ಎಬಿಜಿ ಸಮೂಹಕ್ಕೆ ಸೇರಿದ ಸಿಮೆಂಟ್ ತಯಾರಿಕೆ ಕಂಪನಿಯ 963 ಕೋ.ರೂ.ವೌಲ್ಯದ ಆಸ್ತಿಗಳನ್ನು ಜಫ್ತಿ ಮಾಡಿತ್ತು. ಐಎಲ್ ಆ್ಯಂಡ್ ಎಫ್ಎಸ್ ಗ್ರೂಪ್ಗೆ ಸೇರಿದ ಬ್ಯಾಂಕೇತರ ಹಣಕಾಸು ಸಂಸ್ಥೆ ಐಎಫ್ಐಎನ್ ಎಬಿಜಿ ಗ್ರೂಪ್ನಂತಹ ಕಂಪನಿಗಳಿಗೆ ನೀಡಿದ್ದ ಥರ್ಡ್ ಪಾರ್ಟಿ ಸಾಲಗಳಿಂದಾಗಿ ಅದು 2,000 ಕೋ.ರೂ.ಗಳ ನಷ್ಟಕ್ಕೆ ಗುರಿಯಾಗಿದ್ದು ಈ.ಡಿ.ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.